ಲಂಕಾ ಬಂದರಿನ 70 ಶೇ. ಹಕ್ಕು ಚೀನಾಕ್ಕೆ: ಒಪ್ಪಂದಕ್ಕೆ ಸಹಿ

ಕೊಲಂಬೊ, ಜು. 29: ಶ್ರೀಲಂಕಾದಲ್ಲಿ 1.5 ಬಿಲಿಯ ಡಾಲರ್ (9623 ಕೋಟಿ ರೂಪಾಯಿ) ವೆಚ್ಚದಲ್ಲಿ ಚೀನಾ ನಿರ್ಮಿಸಿರುವ ಬಂದರಿನ 70 ಶೇಕಡ ಹಕ್ಕನ್ನು ಚೀನಾಕ್ಕೆ ಮಾರಾಟ ಮಾಡುವ ಒಪ್ಪಂದಕ್ಕೆ ಶ್ರೀಲಂಕಾ ಸರಕಾರ ಶನಿವಾರ ಸಹಿ ಹಾಕಿದೆ.
ಬಂದರನ್ನು ನಿರ್ಮಿಸಲು ಚೀನಾದಿಂದ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸುವ ಭಾರದಿಂದ ಚೇತರಿಸಿಕೊಳ್ಳುವುದಕ್ಕಾಗಿ ಶ್ರೀಲಂಕಾ ಈ ಕ್ರಮಕ್ಕೆ ಮುಂದಾಗಿದೆ.
ಮೂಲಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 6 ತಿಂಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಸರಕಾರಿ ಒಡೆತನದ ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಸರಕಾರಿ ಒಡೆತನದ ಚೀನಾ ಮರ್ಚಂಟ್ಸ್ ಪೋರ್ಟ್ ಹೋಲ್ಡಿಂಗ್ ಕೊ ಒಪ್ಪಂದಕ್ಕೆ ಸಹಿ ಹಾಕಿದವು. ಈ ಸಂದರ್ಭದಲ್ಲಿ ಶ್ರೀಲಂಕಾ ಮತ್ತು ಚೀನಾಗಳ ಹಿರಿಯ ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಒಪ್ಪಂದದ ಪ್ರಕಾರ, ಚೀನಾ ಕಂಪೆನಿಯು ಬಂದರಿನಲ್ಲಿ 1.12 ಬಿಲಿಯ ಡಾಲರ್ (7185 ಕೋಟಿ ರೂಪಾಯಿ) ಹೂಡಿಕೆ ಮಾಡಲಿದೆ. ಈ ಬಂದರು ಆಯಕಟ್ಟಿನ ಈಸ್ಟ್-ವೆಸ್ಟ್ ಹಡಗು ಮಾರ್ಗಗಳ ಸಮೀಪದಲ್ಲಿರುವುದು ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಿ ಪರಿಣಮಿಸಿದೆ.
ಆರಂಭಿಕ ಒಪ್ಪಂದಕ್ಕೆ ಶ್ರೀಲಂಕಾದಲ್ಲಿ ಭಾರೀ ಪ್ರತಿರೋಧ ಎದುರಾಗಿರುವುದನ್ನು ಸ್ಮರಿಸಬಹುದಾಗಿದೆ.





