ಮಹಾರಾಷ್ಟ್ರದ ಪಠ್ಯಪುಸ್ತಕದಲ್ಲಿ ರಾಜೀವ್ ಗಾಂಧಿ ಅವಹೇಳನ

ಹೊಸದಿಲ್ಲಿ, ಜು. 29: ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಭ್ರಷ್ಚಾಚಾರಿ ಎಂದು ಉಲ್ಲೇಖಿಸಿದ ಮಹಾರಾಷ್ಟ್ರದ 9ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕವನ್ನು ಹಿಂದೆ ತೆಗೆಯಬೇಕು ಹಾಗೂ ಈ ಪುಸ್ತಕ ಪ್ರಕಟಿಸಿದ ಮಹಾರಾಷ್ಟ್ರ ಸರಕಾರ ಸ್ವಾಮಿತ್ವದ ಶಾಲಾ ಪಠ್ಯ ಪುಸ್ತಕ ಪ್ರಕಟನೆಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಶುಕ್ರವಾರ ಆಗ್ರಹಿಸಿದೆ.
ಸಮಕಾಲೀನ ಚರಿತ್ರೆಯ ಈ ಭಾಗವನ್ನು ಪರಿಷ್ಕರಿಸಿ ಪ್ರಕಟನಕಾರರಾದ ಬಾಲ್ ಭಾರತಿ ಪಠ್ಯಪುಸ್ತಕವನ್ನು ಮರು ಮುದ್ರಣ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸೇನಾ ಉಪಕರಣ ಮುಖ್ಯವಾಗಿ ವಿದೇಶಿ ಕಂಪೆನಿ ಬೋಫರ್ಸ್‌ನಿಂದ ದೂರಗಾಮಿ ಪಿರಂಗಿ ಖರೀದಿಸುವಲ್ಲಿ ಭ್ರಷ್ಚಾಚಾರ ಎಸಗಿದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ತೀವ್ರ ಟೀಕೆ ಎದುರಿಸಬೇಕಾಯಿತು ಎಂದು ಪಠ್ಯಪುಸ್ತಕದ ಅಧ್ಯಾಯವೊಂದು ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಮಹಾ ಚುನಾವಣೆಯಲ್ಲಿ ರಾಜಕೀಯ ಭ್ರಷ್ಟಾಚಾರ ಪ್ರಮುಖ ವಿಷಯವಾಯಿತು. ಇದರಿಂದ ಕಾಂಗ್ರೆಸ್ ಪಕ್ಷ ಸೋತಿತು ಎಂದು ಪಠ್ಯಪುಸ್ತಕ ಹೇಳಿದೆ.
ಈ ಸಾಲುಗಳು ವಿವಾದ ಹುಟ್ಟು ಹಾಕಿದೆ ಹಾಗೂ ಕಾಗ್ರೆಸ್‌ನ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ರಾಜ್ಯದ ಶಿಕ್ಷಣ ಸಚಿವ ವಿನೋದ್ ತಾವ್ಡೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.







