ಮಕ್ಕಳ ಸಾಗಾಟ ಪ್ರಕರಣ: ಬಿಜೆಪಿ ರಾಜ್ಯಸಭೆ ಸಂಸದೆ ರೂಪಾ ಗಂಗೂಲಿ ವಿಚಾರಣೆ

ಕೋಲ್ಕತಾ, ಜು. 29: ಜಲ್‌ಪಾಯ್‌ಗುರಿ ಮಕ್ಕಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯ ಸಭಾ ಸಂಸದೆ ರೂಪಾ ಗಂಗೂಲಿಯ ನಿವಾಸಕ್ಕೆ ಭೇಟಿ ನೀಡಿರುವ ಪಶ್ಚಿಮಬಂಗಾಳದ ಸಿಐಡಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಸಿಐಡಿ ಅಧಿಕಾರಿಗಳ ತಂಡ ದಕ್ಷಿಣ ಕೋಲ್ಕತಾದಲ್ಲಿರುವ ಗಂಗೂಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮಕ್ಕಳ ಸಾಗಾಟ ಪ್ರಕರಣದ ಬಂಧಿತ ಆರೋಪಿ, ಬಿಜೆಪಿ ಮಹಿಳಾ ದಳದ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಂಬಂಧ ಇರುವ ಬಗ್ಗೆ ಗಂಗೂಲಿ ಅವರನ್ನು ವಿಚಾರಣೆ ನಡೆಸಿದೆ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದತ್ತು ನಿಯಮ ಉಲ್ಲಂಘಿಸಿ ಶಿಶುಗಳು ಹಾಗೂ ಮಕ್ಕಳನ್ನು ವಿದೇಶಿಗರಿಗೆ ಮಾರಾಟ ಮಾಡುತ್ತಿದ್ದ ಮಕ್ಕಳ ಸಾಗಾಟ ಜಾಲವನ್ನು ಸಿಐಡಿ ಈ ವರ್ಷ ಆರಂಭದಲ್ಲಿ ಬಯಲಿಗೆಳೆದಿತ್ತು.
ಜುಹಿ ಚೌಧುರಿಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಗಂಗೂಲಿಯನ್ನು ನಾವು ಪ್ರಶ್ನಿಸಿದ್ದೇವೆ. ಇನ್ನೂ ಕೆಲವು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಬಿಜೆಪಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಸ್ ವಿಜಯವರ್ಗಿಯಾ ಹಾಗೂ ಇತರ ಇಬ್ಬರು ನಾಯಕರಿಗೆ ಸಿಐಡಿ ನೊಟೀಸು ಜಾರಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.







