ಶೇ. 30 ರಷ್ಟು ಕ್ಷಿಪಣಿ ಪರೀಕ್ಷೆಯಲ್ಲಿ ವಿಫಲ: ಸಿಎಜಿ

ಹೊಸದಿಲ್ಲಿ, ಜು. 29: ಚೀನ ಹಾಗೂ ಪಾಕಿಸ್ತಾನದ ವೈರತ್ವವನ್ನು ಭಾರತ ಎದುರಿಸುತ್ತಿರುವ ಸಂದರ್ಭದಲ್ಲೇ ಭಾರತ ಶೇ. 30ಕ್ಕಿಂತಲೂ ಅಧಿಕ ವ್ಯೆಹಾತ್ಮಕ ಕ್ಷಿಪಣಿ ವ್ಯವಸ್ಥೆ ಆರಂಭಿಕ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.
ಐಎಲ್ -76 ಸಾಗಾಟ ವಿಮಾನಗಳ ನಿರ್ವಹಣೆ ಹಾಗೂ ಯುದ್ಧ ವಿಮಾನಗಳ ಮೇಲ್ದರ್ಜೀಕರಣದಲ್ಲಿ ಗಂಭೀರ ತಪ್ಪು ಪತ್ತೆಯಾಗಿದ್ದು, ಇದು ಅತ್ಯಂತ ಗಂಭೀರ ಹಾಗೂ ಆತಂಕದ ವಿಚಾರ. ಆದುದರಿಂದ ವ್ಯೆಹಾತ್ಮಕ ಕ್ಷಿಪಣೆ ವ್ಯವಸ್ಥೆ ಆಕ್ಷಾ ಹೊಂದಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ವರದಿ ಹೇಳಿದೆ.
2013-15ರಲ್ಲಿ ಗೊತ್ತುಪಡಿಸಲಾದ 6 ಸ್ಥಳಗಳಲ್ಲಿ ಈ ಕ್ಷಿಪಣಿ ವ್ಯವಸ್ಥೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ಇದುವರೆಗೆ ಒಂದೇ ಒಂದು ಸ್ಥಳದಲ್ಲಿ ಈ ಕ್ಷಿಪಣಿ ವ್ಯವಸ್ಥೆ ಸ್ಥಾಪಿಸಿಲ್ಲ. ನಾಗರಿಕ ಕಾಮಗಾರಿಗಳ ಕಾರಣದಿಂದ ವಿಳಂಬವಾಗಿ ಕ್ಷಿಪಣಿ ನಿಯೋಜನೆಯಿಂದ 3,619 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
2014 ನವೆಂಬರ್ ವರೆಗೆ 80 ಕ್ಷಿಪಣಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 2014 ನವೆಂಬರ್ ಹಾಗೂ ಎಪ್ರಿಲ್ ನಡುವೆ 20 ಕ್ಷಿಪಣಿಗಳ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಆರು ಕ್ಷಿಪಣಿ ಅಥವಾ ಶೇ. 30 ಕ್ಷಿಪಣಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಕ್ಷಿಪಣಿಗಳ ವಿಫಲತೆ ಪ್ರಮಾಣ ಅತ್ಯಧಿಕವಾಗಿದೆ ಎಂದು ಸಿಎಜಿ ವರದಿ ಹೇಳಿದೆ.







