ಮಹಿಳಾ ವಿಶ್ವಕಪ್ ಕ್ರಿಕೆಟ್: ರಾಜ್ಯದ ಇಬ್ಬರಿಗೆ ತಲಾ 25ಲಕ್ಷ ರೂ. ಬಹುಮಾನ ಘೋಷಣೆ

ಉಡುಪಿ, ಜು.29: ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಮರಳಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾದ ಕರ್ನಾಟದ ಇಬ್ಬರು ಆಟಗಾರ್ತಿಯರಿಗೆ ತಲಾ 25 ಲಕ್ಷ ರೂ.ಗಳ ಬಹುಮಾನವನ್ನು ರಾಜ್ಯ ಸರಕಾರದ ವತಿಯಿಂದ ನೀಡಲಾಗುವುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಿಸಿದ್ದಾರೆ.
ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ದಿಟ್ಟ ಹೋರಾಟ ನೀಡಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಕ್ರೀಡಾ ಸಚಿವರು, ‘‘ ಭಾರತದ ಮಹಿಳಾ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿದ್ದ ಕರ್ನಾಟಕ ಕ್ರಿಕೆಟ್ ಆಟಗಾರ್ತಿಯರಾದ ವಿಜಯಪುರ ಜಿಲ್ಲೆಯ ರಾಜೇಶ್ವರಿ ಗಾಯಕ್ವಾಡ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ವೇದಾ ಕೃಷ್ಣಮೂರ್ತಿ ಇವರಿಗೆ ರಾಜ್ಯ ಸರಕಾರದ ವತಿಯಿಂದ ತಲಾ 25 ಲಕ್ಷ ರೂ.ಗಳಂತೆ ಒಟ್ಟು 50 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು’’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





