ವಿಶ್ವ ಚಾಂಪಿಯನ್‌ಶಿಪ್‌ಗೆ ದ್ಯುತಿ ಚಂದ್
ಒಡಿಶಾ ಓಟಗಾರ್ತಿಯ ಪರ ತೀರ್ಪು ನೀಡಿದ ಸಿಎಎಸ್

ಹೊಸದಿಲ್ಲಿ, ಜು.29: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ವಿರುದ್ಧ 2 ತಿಂಗಳ ಅಮಾನತಿಗೆ ಆಗ್ರಹಿಸಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿದ ಸ್ವಿಟ್ಝರ್ಲೆಂಡ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ(ಸಿಎಎಸ್) ದ್ಯುತಿಗೆ ಲಂಡನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಹಾದಿ ಸುಗಮಗೊಳಿಸಿದೆ.
‘ಲಿಂಗ ಪ್ರಕರಣ’ಕ್ಕೆ ಸಂಬಂಧಿಸಿ ಚಂದ್ ವಿರುದ್ಧ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ಸಿಎಎಸ್ ದ್ಯುತಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಅರ್ಹರಿದ್ದಾರೆ ಎಂದಿದೆ. 21ರ ಹರೆಯದ ದ್ಯುತಿ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಮಾರ್ಕ್ ತಲುಪದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ, ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್) ಆಗಸ್ಟ್ 4 ರಿಂದ 13ರ ತನಕ ನಡೆಯಲಿರುವ ಚಾಂಪಿಯನ್‌ಶಿಪ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ದ್ಯುತಿಗೆ ಶುಕ್ರವಾರ ಆಹ್ವಾನ ನೀಡಿತ್ತು.
ಹೊಸದಿಲ್ಲಿಯಲ್ಲಿ ಮಾ.15 ರಂದು ನಡೆದಿದ್ದ ಇಂಡಿಯನ್ ಜಿಪಿ ಟೂರ್ನಿಯಲ್ಲಿ ದ್ಯುತಿ 11.30 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು. ಜಾಗತಿಕ ರ‍್ಯಾಂಕಿಂಗ್‌ನಲ್ಲಿ 103ನೆ ಸ್ಥಾನದಲ್ಲಿರುವ ಅವರ ಸಾಧನೆಯನ್ನು ಗುರುತಿಸಿ ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ‘‘ದ್ಯುತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಆಕೆಗೆ ಐಎಎಎಫ್ ಆಹ್ವಾನ ನೀಡಿದ್ದನ್ನು ಭಾರತದ ಅಥ್ಲೆಟಿಕ್ ಫೆಡರೇಶನ್(ಎಎಫ್‌ಐ)ದೃಢಪಡಿಸಿದೆ. ಆಕೆ ಟೂರ್ನಿಗೆ ಸಜ್ಜಾಗಿದ್ದು, ಬ್ರಿಟನ್ ವೀಸಾ ಹೊಂದಿರುವ ಕಾರಣ ಕೂಡಲೇ ಲಂಡನ್‌ಗೆ ತೆರಳಲಿದ್ದಾರೆ. ಈಗಾಗಲೇ 24 ಸದಸ್ಯರ ತಂಡ ಲಂಡನ್‌ಗೆ ನಿರ್ಗಮಿಸಿದ್ದು, ದ್ಯುತಿ ಒಬ್ಬರೇ ನೇರ ವಿಮಾನದಲ್ಲಿ ತೆರಳುವ ಸಾಧ್ಯತೆಯಿದೆ ಎಂದು ದ್ಯುತಿ ಕೋಚ್ ರಮೇಶ್ ಹೇಳಿದ್ದಾರೆ.







