ಕೇರಳ ಹೈಕೋರ್ಟ್ ತೀರ್ಪು ಪಾಲಿಸಲು ಎಎಫ್‌ಐಗೆ ಗೋಯೆಲ್ ಸಲಹೆ
ಹೊಸದಿಲ್ಲಿ, ಜು.29: ಮುಂಬರುವ ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿ.ಯು. ಚಿತ್ರಾಗೆ ಭಾಗವಹಿಸಲು ಎಲ್ಲ ವ್ಯವಸ್ಥೆೆ ಕಲ್ಪಿಸಬೇಕೆಂದು ಕೇರಳ ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವಂತೆ ಭಾರತದ ಅಥ್ಲೆಟಿಕ್ಸ್ ಫೆಡರೇಶನ್‌ಗೆ(ಎಎಫ್‌ಐ) ಕ್ರೀಡಾ ಸಚಿವ ವಿಜಯ್ ಗೋಯೆಲ್ ಸಲಹೆ ನೀಡಿದ್ದಾರೆ.
ಕೇರಳ ಹೈಕೋರ್ಟ್ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಕೇರಳ ಅಥ್ಲೀಟ್ ಚಿತ್ರಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ ನೀಡಬೇಕೆಂದು ಕೇಂದ್ರಸರಕಾರಕ್ಕೆ ನಿರ್ದೇಶನ ನೀಡಿತ್ತು. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದಂತೆ ಕಾಣುತ್ತಿಲ್ಲ. ಅರ್ಹ ಅಥ್ಲೀಟ್‌ಗಳನ್ನು ನಿರ್ಲಕ್ಷಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿತ್ತು.
ಗೋಯೆಲ್ ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಾಲಾರೊಂದಿಗೆ ಈ ವಿಷಯದ ಕುರಿತು ಮಾತನಾಡಿದ್ದು, ಕೇರಳ ಹೈಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಪಿ.ಯು. ಚಿತ್ರಾರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ವೈರ್ಲ್ಡ್ ಕಾರ್ಡ್ ಪ್ರವೇಶ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಕ್ರೀಡಾಸಚಿವಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಚಿತ್ರಾ ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 1500 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಆದರೆ, ಎಎಫ್‌ಐ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಿರುವ ತಂಡದಲ್ಲಿ ಚಿತ್ರಾಗೆ ಸ್ಥಾನ ನೀಡಿರಲಿಲ್ಲ. ಎಎಫ್‌ಐ ಕ್ರಮ ಪ್ರಶ್ನಿಸಿ ಚಿತ್ರಾ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.







