ಗುಜರಾತ್ ಶಾಸಕರ ಹೈಜಾಕ್: ಕಾಂಗ್ರೆಸ್ ಮಾಡಿದುಣ್ಣೋ ಮಾರಯ್ಯ; ಎಚ್.ಡಿ.ಕುಮಾರಸ್ವಾಮಿ ಟೀಕೆ

ಉಡುಪಿ, ಜು.30: ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಶಾಸಕ ರನ್ನು ಹೈಜಾಕ್ ಮಾಡುವ, ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಈಗ ಬಿಜೆಪಿಯವರು ಮುಂದುವರೆಸುತ್ತಿದ್ದಾರೆ. ಗುಜರಾತ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಹೈಜಾಕ್‌ಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಯಾವುದೇ ನೈತಿಕತೆ ಕಾಂಗ್ರೆಸ್‌ಗೆ ಇಲ್ಲವಾಗಿದೆ. ಮಾಡಿದುಣ್ಣೋ ಮಾರಯ್ಯ ಗಾದೆ ಕಾಂಗ್ರೆಸ್ ಪಕ್ಷಕ್ಕೆ ಈಗ ಅನ್ವಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕನಾರ್ಟಕದಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷದ ಎಂಟು ಮಂದಿ ಶಾಸಕರನ್ನು ಹೈಜಾಕು ಮಾಡಿದ್ದರು. ಹಿಂದೆ ಕಾಂಗ್ರೆಸ್‌ನವರು ಮಾಡಿರುವುದನ್ನು ಈಗ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ದೇಶದ ಸಮಸ್ಯೆ ಬಗೆಹರಿಸಿ ನಾಡಿನ ಅಭಿವೃದ್ಧಿ ಮಾಡುದಕ್ಕಿಂತ ಹೆಚ್ಚಾಗಿ ರಾಜ್ಯದ ಜನತೆಯ ತೆರಿಗೆ ಹಣವನ್ನು ಲೂಟಿ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾ ವಣೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಡಿಕೆಶಿ ಜೊತೆ ಸಂಬಂಧ ಕುರಿತ ಪ್ರಶ್ನೆಗೆ, ಪಕ್ಷವನ್ನು ಬಲಿಕೊಟ್ಟು ಮತ್ತೊಂದು ಪಕ್ಷದ ನಾಯಕರ ಜೊತೆ ಸಂಬಂಧ ಬೆಳೆಸಿಕೊಳ್ಳುವುದಿಲ್ಲ. ನಮ್ಮ ಆದ್ಯತೆ ಪಕ್ಷದ ಕಾರ್ಯಕರ್ತರು. ಸಾರ್ವಜನಿಕ ಸಮಾರಂಭದಲ್ಲಿ ಭೇಟಿಯಾಗಿರುವುದಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಮಾಡಬೇಕೆಂದು ನಾವು ಅರ್ಜಿ ಇಟ್ಟುಕೊಂಡು ಯಾರ ಬಳಿಯೂ ಹೋಗಿಲ್ಲ. ನಾವು ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಉಡುಪಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಅದರ ಬಗ್ಗೆ ಇಂದು ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.
ಲಿಂಗಾಯುತ ಧರ್ಮದಿಂದ ಯಾರಿಗೂ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾಲ್ಕು ದಿನಗಳ ಕಾಲ ರಾಜಕಾರಣಿಗಳ ಕೆಸರೆಚಾಟಕ್ಕೆ ವೇದಿಕೆ ಮಾಡಿಕೊಡಲಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಲಾಭದ ಲೆಕ್ಕಚಾರ ಇಟ್ಟು ಕೊಂಡು ಈ ರೀತಿ ಮಾಡಲಾಗುತ್ತಿದೆ. ಈ ವಿವಾದವನ್ನು ಬಗೆಹರಿಸಲು ಆ ಸಮಾಜದ ಧರ್ಮಗುರುಗಳಿಗೆ ಬಿಟ್ಟು ಕೊಡಬೇಕು. ರಾಜಕಾರಣಿಗಳು ಇದರಲ್ಲಿ ಭಾಗಿಗಳಾಗುವುದು ಸರಿಯಲ್ಲ ಎಂದು ಅವರು ಹೇಳಿದರು.
ಹಲವು ವರ್ಷಗಳಿಂದ ಒಂದು ಧ್ವಜವನ್ನು ರಾಜ್ಯದಲ್ಲಿ ಬಳಕೆ ಮಾಡಲಾಗುತ್ತಿದೆ. ಅದನ್ನು ರಾಜ್ಯದ ಜನತೆ ಸ್ವೀಕರಿಸಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅದಕ್ಕೆ ಪ್ರಾಶಸ್ತ್ರ ಕೊಡುತ್ತಿದ್ದಾರೆ. ಈಗ ಮುಖ್ಯಮಂತ್ರಿ ಹೊಸ ಧ್ವಜಕ್ಕಾಗಿ ಸಮಿತಿ ರಚನೆ ಮಾಡುವ ಅಗತ್ಯ ಇರಲಿಲ್ಲ ಎಂದು ಅವರು ತಿಳಿಸಿದರು.
ನಾಲ್ಕೂವರೆ ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಿರಿಸಿರುವ ಅನುದಾನ ದಲ್ಲಿ ಕೇವಲ ಶೇ.43ರಷ್ಟು ಮಾತ್ರ ಬಳಕೆ ಮಾಡಲಾಗಿದೆ ಎಂಬ ವಿಚಾರ ಕಡತಗಳಿಂದ ಬಹಿರಂಗವಾಗಿರುವ ಕುರಿತ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಎಂಬುದು ಮತ ಪಡೆಯಲು ಹಾಗೂ ಘೋಷಣೆಯಲ್ಲಿ ಮಾತ್ರ. ಆದರೆ ಕಾರ್ಯಕ್ರಮ ಅನುಷ್ಠಾನ ತರುವುದರಲ್ಲಿ ಇಲ್ಲ. ಈ ಅನುದಾನ ಅಲ್ಪಸಂಖ್ಯಾತ ವರ್ಗದ ಆರ್ಥಿಕ ಬದುಕುನ್ನು ಅಭಿವೃದ್ದಿ ಪಡಿಸುವಲ್ಲಿ ಬಳಕೆಯಾಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ದೂರಿದರು.
ಅನಧಿಕೃತವಾಗಿ ಕೆಂಪಯ್ಯರೇ ಗೃಹ ಸಚಿವರು
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಗೃಹ ಇಲಾಖೆಯನ್ನು ಸಚಿವ ರಮಾನಾಥ ರೈಗೆ ಕೊಡಲು ಹೊರಟಿದ್ದಾರೆ. ಆದರೆ ರಮಾನಾಥ ರೈ ಹೆಸರಿಗೆ ಮಾತ್ರ ಗೃಹ ಮಂತ್ರಿಯಾಗಿರುತ್ತಾರೆ. ಅನಧಿಕೃತವಾಗಿ ಕೆಂಪಯ್ಯರೇ ಈ ರಾಜ್ಯದ ಗೃಹ ಸಚಿವರು. ರಮಾನಾಥ ರೈ ಅವರನ್ನು ಕೇವಲ ಹೆಬೆಟ್ಟು ಹಾಕಲು ಮಾತ್ರ ಬಳಸಲಾಗುತ್ತದೆ. ಈಗಾಗಲೇ ಮುಖ್ಯಮಂತ್ರಿ, ಕೆಂಪಯ್ಯ ನನಗೆ ಅನಿವಾರ್ಯ ಎಂದು ಹೇಳಿದ್ದಾರೆ. ಕೆಂಪಯ್ಯ ಇವರಿಗೆ ಯಾವ ರೀತಿಯ ಆಡಳಿತ ನಡೆಸಲು ಅನಿವಾರ್ಯ ಎಂಬುದು ಗೊತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಶಾಸಕ ಝಮೀರ್ ಅಹ್ಮದ್ ರುಂಡ ತುಂಡಾಗಿರುವ ಹೇಳಿಕೆ ಬಗ್ಗೆ ಪ್ರತಿಕ್ರಿ ಯಿಸಿದ ಅವರು, ಝಮೀರ್‌ಗೆ ರುಂಡ ಕಟ್ ಮಾಡುವುದು ಸುಲಭ. ಯಾರೂ ರುಂಡ ಕಟ್ ಮಾಡುವುದು ಬೇಡ. ಅಂತಹ ಭಾವಾಧ್ವೇಗ ಮಾತು ಗಳನ್ನು ಆಡಬಾರದು. ಚುನಾವಣೆಯಲ್ಲಿ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇವರು ಈ ರೀತಿಯ ಹೇಳಿಕೆ ಕೊಟ್ಟು ಕುಟುಂಬಗಳಲ್ಲಿ ಆತಂಕ ಸೃಷ್ಠಿಸುವ ಕೆಲಸ ಮಾಡಬಾರದು ಎಂದರು.







