'ಯಶವಂತಪುರ-ಕಾರವಾರ ರೈಲಿನ ಸಮಯ ಕಡಿತಕ್ಕೆ ಆಗ್ರಹ'
ಉಡುಪಿ, ಜು.30: ವಾರಕ್ಕೆ ಮೂರು ದಿನ ಓಡುತ್ತಿದ್ದ ಯಶವಂತಪುರ- ಅರಸೀಕೆರೆ- ಮಂಗಳೂರು -ಕಾರವಾರ ಹಗಲು ರೈಲಿನ ಮಾರ್ಗವನ್ನು ಮೇ 10ರಿಂದ ನೆಲಮಂಗಲ -ಕುಣಿಗಲ್ -ಹಾಸನ ಮೂಲಕ ಬದಲಾಯಿಸಿದ್ದು, ಇದರಿಂದ ದೂರ 160ಕಿ.ಮೀ. ಕಡಿಮೆಯಾದರೂ ಸಮಯ ಕಡಿತ ಆಗದಿರುವುದರಿಂದ ಇದನ್ನು ಪರಿಶೀಲಿಸುವಂತೆ ನೈಋತ್ಯ ರೈಲ್ವೆಗೆ ಒತ್ತಾಯಿಸುವ ಬಗ್ಗೆ ಇತ್ತೀಚೆಗೆ ಉಡುಪಿಯ ಬಳಕೆದಾರರ ವೇದಿಕೆಯಲ್ಲಿ ನಡೆದ ರೈಲ್ವೆ ಯಾತ್ರಿಕರ ಸಂಘದ ಸಭೆಯಲ್ಲಿ ಮಹತ್ವ ನಿರ್ಣಯವನ್ನು ಕೈಗೊಳ್ಳಲಾಯಿತು.
ಇತರ ನಿರ್ಣಯಗಳು: ಕರಾವಳಿಯ ಸಾವಿರಾರು ಕುಟುಂಬಗಳು ಪಶಿಮ ರೈಲ್ವೆ ದಾದರ್‌ನಿಂದ ನಯಗಾಂವ್‌ವರೆಗಿನ 16 ನಿಲ್ದಾಣಗಳಿಗೆ ಹೊಂದಿಕೊಂಡು ನೆಲೆಸಿದ್ದು, ಇವರು ಊರಿಗೆ ಬರಬೇಕಾದರೆ ಸುಮಾರು ಒಂದೂವರೆ ಸಾವಿರ ಟ್ಯಾಕ್ಸಿಗೆ ಹಣ ನೀಡಿ ಕುರ್ಲಾ ಅಥವಾ ಸಿಎಸ್ಟಿ ಸ್ಟೇಷನ್ಗೆ ಹೋಗಬೇಕಾಗಿದೆ. ಹೀಗಾಗಿ ಅವರು ರೈಲಿನಲ್ಲಿ ಬರದೇ ಖಾಸಗಿ ಬಸ್‌ಗಳನ್ನು ಅವಲಂಬಿಸುತ್ತಿ ದ್ದಾರೆ. ಇದಕ್ಕೆ ಪರಿಹಾರವಾಗಿ ಬಾಂದ್ರಾ -ವಸೈ ರೋಡ್ ನಿಂದ ಮಂಗಳೂರಿಗೆ ಕನಿಷ್ಠ ವಾರಕ್ಕೊಂದು ರೈಲು ಓಡಿಸುವಂತೆ ಮನವಿ ಸಲ್ಲಿಸಲಾಗುವುದು.
ಯಶವಂತಪುರ -ಮಂಗಳೂರು ಜಂಕ್ಷನ್ ರೈಲು ಮೂಲ ವೇಳಾಪಟ್ಟಿಯ ಪ್ರಕಾರ ಮಂಗಳೂರಿನಿಂದ ಬೆಳ್ಳಿಗ್ಗೆ 6 ಗಂಟೆಗೆ ಹೊರಡ ಬೇಕಾಗಿದ್ದು, ಎ.10ರ ನಂತರ 11 ಗಂಟೆಗೆ ಬದಲಾಯಿಸಲಾಗಿದೆ. ಇದರಿಂದ ರೈಲು ಯಶವಂತಪುರ ತಲುಪುಗ ರಾತ್ರಿ 8.30ಗಂಟೆ ಆಗುತ್ತಿದ್ದು, ಹೆಂಗಸರಿಗೆ, ಹಿರಿಯ ನಾಗರಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊರಡುವ ಸಮಯವನ್ನು ಬೆಳಗ್ಗೆ 8 ಗಂಟೆಗೆ ಬದಲಾಯಿಸುವ ಬಗ್ಗೆ ನೈಋತ್ಯ ರೈಲ್ವೆಗೆ ಮನವಿ ಸಲ್ಲಿಸಲಾಗುವುದು.
ಉಳ್ಳಾಲ ಸೇತುವೆಯ ನಂತರದ ಮಂಗಳೂರು ಪಣಂಬೂರು ಭಾಗವನ್ನು ಕೊಂಕಣ್ ರೈಲ್ವೆ ಗೆ ಸೇರಿಸಿದಲ್ಲಿ ರೈಲ್ವೆ ಆದಾಯ 400 ಕೋಟಿಯಷ್ಟು ಹೆಚ್ಚಾಗಿ ಮುಂದೆ ಕೊಂಕಣ್ ರೈಲ್ವೆಯನ್ನು ದ್ವಿಪಥ ಗೊಳಿಸಬೇಕು. ಕೊಂಕಣ್ ರೈಲ್ವೆಯ ಪ್ರತಿವರ್ಷದ ಮಳೆಗಾಲದ ನಿಧಾನಗತಿಯ ವೇಳಾ ಪಟ್ಟಿಯು ಜೂನ್‌ನಿಂದ ಅಕ್ಟೋಬರ್‌ವರೆಗೆ ಇದ್ದು, ಕರಾವಳಿಯಲ್ಲಿ ಸೆಪ್ಟೆಂಬರ್ ತಿಂಗಳಿಗೆ ಬಹುತೇಕ ಮಳೆ ನಿಲ್ಲುವುದರಿಂದ ಈ ಅವಧಿಯನ್ನು ಒಂದು ತಿಂಗಳು ಕಡಿತಗೊಳಿಸಿ ಸೆಪ್ಟೆಂಬರ್‌ಗೆ ಸೀಮಿತಗೊಳಿಸಬೇಕು.
ಉಡುಪಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಹಾಕಿರುವ ವೇಗ ನಿಯಂತ್ರಕಗಳು ಅವೈಜ್ಞಾನಿಕ ಹಾಗೂ ಅಪಾಯಕಾರಿಯಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು ಕೂಡಲೇ ದ್ವಿಪಥಗೊಳಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದು ಸಂಘಧ ಅಧ್ಯಕ್ಷ ಆರ್.ಎಲ್.ಡಯಾಸ್ ತಿಳಿಸಿದ್ದಾರೆ.







