ರಸ್ತೆಗೆ ನಾಮಕರಣ ವಿವಾದ: ತಡೆಯಾಜ್ಞೆ ತೆರವಿಗೆ ಆಗ್ರಹಿಸಿ ಧರಣಿ

ಪಡುಬಿದ್ರೆ, ಜು. 30: ಮುಲ್ಕಿ ಸುಂದರಾಮ ಶೆಟ್ಟಿಯವರ ಹೆಸರನ್ನು ಮಂಗಳೂರಿನ ಬಾವುಟ ಗುಡ್ಡೆಯ ಲೈಟ್‌ಹೌಸ್ ರಸ್ತೆಗೆ ನಾಮಕರಣದ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಪಡುಬಿದ್ರೆ ಬಂಟರ ಸಂಘ ಮತ್ತು ಮುಲ್ಕಿ ಸುಂದರಾಮ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಪಡುಬಿದ್ರೆಯಲ್ಲಿ ರವಿವಾರ ಪ್ರತಿಭಟನೆ ನಡೆಯಿತು.
ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ಸುಂದರಾಮ್ ಶೆಟ್ಟಿಯವರು ಜಾತ್ಯಾತೀತ ನೆಲೆವುಳ್ಳ ವ್ಯಕ್ತಿ, ಕರಾವಳಿ ಜಿಲ್ಲೆಯ ಸರ್ವಧರ್ಮದ ಕೆಳವರ್ಗದವರಿಂದ ಮೇಲ್ಪಟ್ಟ ವರ್ಗದವರಿಗೆ ನೌಕರಿ ನೀಡಿದ ಮಹಾನ್ ಚೇತನ. 2009ರಿಂದ ವಿಜಯ ಬ್ಯಾಂಕ್‌ನ ಬಂಧುಗಳು ರಸ್ತೆ ನಾಮಕರಣಕ್ಕಾಗಿ ಮಂಗಳೂರು ಮಹಾನಗರಪಾಲಿಕೆಯಿಂದ ಅನುಮತಿ ಪಡೆದಿದ್ದರು. ಜುಲೈ 2 ರಂದು ರಸ್ತೆ ನಾಮಕರಣ ಉದ್ಘಾಟನೆಗೆ ಎಲ್ಲಾ ಸಿದ್ದತೆ ನಡೆದ ಹಿಂದಿನ ದಿನ ಹಠಾತ್ ಆಗಿ ತಡೆಯಾಜ್ಞೆ ತರುವ ಮೂಲಕ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ಹೆಸರಿನ ರಸ್ತೆ ನಾಮಕರಣಕ್ಕೆ ತಡೆಯಾಜ್ಞೆ ತರಲು ರಾಜ್ಯ ಸರಕಾರದ ಕೈಗೊಂಡ ಆತುರದ ನಿರ್ಧಾರದಿಂದ ನಮ್ಮೆಲ್ಲರಿಗೂ ನೋವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಲೈಟ್‌ಹೌಸ್ ಹಿಲ್ ರಸ್ತೆ ಎಂದು ಕರೆಯಲ್ಪಡುವ ರಸ್ತೆಗೆ 2015 ಫೆಬ್ರುವರಿ 24 ರಂದು ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಬಗ್ಗೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಿರ್ಣಯ ಕೈಗೊಂಡು ಘೋಷಣೆ ಮಾಡಲಾಗಿತ್ತು. ಈ ವಿಷಯದಲ್ಲಿ ಯಾರದಾದರೂ ಆಕ್ಷೇಪಣೆ ಇದ್ದಲ್ಲಿ ಒಂದು ತಿಂಗಳೋಳಗೆ ತಿಳಿಸುವಂತೆ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಜನವರಿ 2016 ರಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ರಸ್ತೆ ನಾಮಕರಣದ ಬಗ್ಗೆ ವರದಿಯನ್ನೂ ನೀಡಿದ್ದಾಗಿ ತಿಳಿಸಿದರು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂಟರ ಸಂಘದಿಂದ ಹೊರಟು ಪಡುಬಿದ್ರೆ ಪೇಟೆಯವರೆಗೆ ಮೆರವಣಿಗೆ ನಡೆಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಮಾಜ ಸೇವಕ ಲೀಲಾಧರ ಶೆಟ್ಟಿ ಕಾಪು, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಮನೋಜ್ ಕುಮಾರ್ ಶೆಟ್ಟಿ ಇದ್ದರು.







