ಇಂಜಿನಿಯರ್ ಎಂದರೆ ಮನೆ, ರಸ್ತೆ ನಿರ್ಮಾಣ ಒಂದೇ ಅಲ್ಲ, ದೇಶ ಕಟ್ಟುವುದೂ ಸೇರಿದೆ: ಎ. ಮಂಜು
.jpg)
ಹಾಸನ, ಜು.30: ಇಂಜಿನಿಯರಿಂಗ್ ಎಂದರೆ ಮನೆ ಕಟ್ಟುವುದು ಹಾಗೂ ರಸ್ತೆ ನಿರ್ಮಾಣ ಒಂದೆ ಅಲ್ಲ. ಜೊತೆಗೆ ದೇಶ ಕಟ್ಟುವುದು ಸೇರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಪದವಿ ಪ್ರಧಾನ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಇಂಜಿನಿಯರ್ ಎಂದರೇ ಕೇವಲ ಮನೆ ಹಾಗೂ ರಸ್ತೆ ನಿಮಾಣ ಎಂಬುದು ವಿದ್ಯಾರ್ಥಿಗಳಲ್ಲಿ ಇತ್ತು. ಇಂದಿನ ದಿನಗಳಲ್ಲಿ ಇಂಜಿನಿಯರ್ ಎಂದರೇ ವೈದ್ಯ, ಆರ್ಮಿ ಕೂಡ ಸೇರುತ್ತದೆ. ಒಂದು ದೇಶ ಪ್ರಗತಿ ಹೊಂದಬೇಕಾದರೇ ಇಂಜಿನಿಯರಿಂಗ್ ಹಿನ್ನಲೆ ಇದ್ದೆ ಇರುತ್ತದೆ. 60ರ ದಶಕದಲ್ಲಿ ಪ್ರಾರಂಭವಾದ ಕಾಲೇಜು ಇಂದು ದೇಶದಲ್ಲೆ 16ನೇ ಸ್ಥಾನದಲ್ಲಿ ಎಂಸಿಇ ಕಾಲೇಜು ಇದ್ದು, ಇಲ್ಲಿ ಶಿಕ್ಷಣ ಪಡೆದವರಿಗೆ ಕರೆದು ಕೆಲಸ ಕೊಡುತ್ತಿರುವುದು ಶಿಕ್ಷಣ ಸಂಸ್ಥೆಗೆ ಒಂದು ಗೌರವ ಎಂದರು.
ಜೊತೆಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇದ್ದಾರೆ. ವಿದ್ಯಾರ್ಥಿಗಳಾದವರೂ ಜೀವನದಲ್ಲಿ ಆಸೆ ಗುರಿ ಇಟ್ಟುಕೊಂಡಿದ್ದರೇ ಸಾಧನೆ ಮಾಡಲು ಸಾಧ್ಯ. ಭೂಮಿ ಮೇಲೆ ಇಂಜಿನಿಯರಿಂಗ್ ಓದಿದವರಿಗೆ ಸಾಕಷ್ಟು ಅವಕಾಶಗಳಿವೆ. ಅದರಲ್ಲೂ ನಮ್ಮ ಭಾರತ ದೇಶವು ಪ್ರಪಂಚದಲ್ಲೆ ಗುರುತಿಸಿಕೊಂಡಿದೆ ಎಂಬುದನ್ನು ಮರೆಯಬಾರದು. ಹೊರ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದು ಇಂಜಿನಿಯರ್ ಮತ್ತು ಡಾಕ್ಟರ್‌ಗಳಿಗೆ ಎಂದು ಕಿವಿಮಾತು ಹೇಳಿದರು. ಹಾರ್ನಳ್ಳಿ ರಾಮಸ್ವಾಮಿ ಕಟ್ಟಿದಂತ ಪಕ್ಷ ದೇಶವನ್ನು ಕೂಡ ಆಳಿದೆ. ಆದರೇ ಈಗ ಬಂದಿರುವ ಪ್ರಧಾನಿ ನರೇಂದ್ರ ಮೊದಿಯಿಂದ ಅಲ್ಲ ಎಂದು ವಿದ್ಯಾರ್ಥಿಗಳ ಮಾತಿಗೆ ಉತ್ತರಿಸಿದರು. ನಾನು ಸೈಕಲ್‌ನಲ್ಲಿ ಸರಕಾರಿ ಕಾಲೇಜಿಗೆ ಹೋಗುತ್ತಿದ್ದೆ. ಆದರೇ ಜೀವನದಲ್ಲಿ ನಾನು ಗುರಿ ಇಟ್ಟುಕೊಂಡಂತೆ ಬಂದಿದ್ದೇನೆ. ಯಾರೆ ಆಗಲಿ ಹುದ್ದೆಗೆ ಬಂದಾಗ ನಿಮ್ಮ ಗುರುಗಳನ್ನು ಎಂದು ಮರೆಯಬೇಡಿ ಎಂದು ಸಲಹೆ ನೀಡಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಪದವಿ ಪಡೆದವರಿಗೆ ಸನ್ಮಾನಿಸಿ ಗೌರವಿಸಿದರು. ಇದಕ್ಕೆ ಮೊದಲು ಕಾಲೇಜು ಆವರಣದಿಂದ ಮೆರವಣಿಗೆ ಮೂಲಕ ಸಭಾಂಗಣ ಒಳ ಬಂದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಗುರುದೇವ್, ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಖಜಾಂಚಿ ಆರ್. ಶೇಷಗಿರಿ, ಕಾಲೇಜಿನ ಪ್ರಾಂಶುಪಾಲರು ಇದ್ದರು.