ಕೃಷಿ, ಗ್ರಾಮೀಣ ಕ್ರೀಡೆಯ ಮೂಲಕ ಗ್ರಾಮೀಣ ಬದುಕಿಗೆ ಅರ್ಥ ಕಲ್ಪಿಸಿ: ಶಾಸಕ ಕೆ.ಜಿ.ಬೋಪಯ್ಯ
5ನೇ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡಾಕೂಟ-2017

ಮಡಿಕೇರಿ, ಜು.30: ಕೊಡಗಿನಲ್ಲಿ ಕೃಷಿ ಚಟುವಟಿಕೆಗಳ ಜೀವಂತಿಕೆ ಕಾಪಾಡಿಕೊಳ್ಳುವ ಹಿನ್ನಲೆಯಲ್ಲಿ ಪೂರ್ವಜರ ಕಲ್ಪನೆಯಲ್ಲಿ ಹುಟ್ಟಿಕೊಂಡ ಗ್ರಾಮೀಣ ಕ್ರೀಡಾಕೂಟಗಳು ಜಿಲ್ಲೆಯ ಪಾರಂಪರಿಕತೆಯನ್ನು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕೊಡಗಿನ ಭತ್ತದ ಕೃಷಿಗೆ ಪೂರಕವಾಗಿರುವ ಗ್ರಾಮೀಣ ಕ್ರೀಡೆಗಳು ನಡೆಯುವುದರಿಂದ ಕೃಷಿಯ ಉಳಿವು ಸಾಧ್ಯವಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಅಭಿಪ್ರಾಯಪಟ್ಟರು.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವಿರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ನಿವೃತ್ತ ಮೇ.ಜ. ಕೆ.ಪಿ.ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ನಡೆದ 5ನೇ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡಾಕೂಟ-2017ನ್ನು ಗಿಡವೊಂದಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಗೆ ಕ್ರೀಡೆಯಲ್ಲಿ ತನ್ನದೇ ಆದ ಮಹೋನ್ನತ ಸ್ಥಾನವಿದೆ. ಕ್ರೀಡೆಯ ಮೂಲಕ ಭಾರತದ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ದೇಶದ ಕ್ರೀಡಾ ಕ್ಷೇತ್ರಕ್ಕೆ ನಿರಂತರವಾಗಿ ಅಪಾರವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ಎಲ್ಲಾ ಕೊಡುಗೆಗಳ ಹಿಂದೆ ಕೊಡಗಿನ ಗ್ರಾಮೀಣ ಕ್ರೀಡಾ ಕೂಟಗಳ ಪಾತ್ರ ಉಲ್ಲೇಖನೀಯವಾದದ್ದು ಎಂದು ಅವರು ಹೇಳಿದರು.
ಕೃಷಿ ಮತ್ತು ಗ್ರಾಮೀಣ ಕ್ರೀಡೆಗೆ ಅವಿನಾಭಾವ ಸಂಬಂಧವಿದೆ. ಇವುಗಳೆರಡರ ಪೈಕಿ ಯಾವುದಾದರೊಂದು ನಶಿಸಿದರೆ ಕೃಷಿ ಮತ್ತು ಗ್ರಾಮೀಣ ಕ್ರೀಡೆ ಎರಡೂ ಕೂಡ ಅವನತಿಯ ಹಾದಿ ಹಿಡಿಯುತ್ತದೆ. ಆದ್ದರಿಂದ ಕೃಷಿಗೆ ಯುವ ಪೀಳಿಗೆ ಮೊದಲ ಆದ್ಯತೆ ನೀಡುವಂತಾಗಬೇಕು. ಜೊತೆಗೆ ಗ್ರಾಮೀಣ ಕ್ರೀಡೆಗಳ ಜೀವಂತಿಕೆಯೂ ಕಾಪಾಡುವಂತಾಗಬೇಕು. ಈ ಎರಡು ಮಹತ್ತರವಾದ ಜವಾಬ್ದಾರಿಯ ಗಂಭೀರತೆಯನ್ನು ಕೊಡಗಿನ ಪ್ರಸಕ್ತ ತಲೆಮಾರು ತಿಳಿದುಕೊಳ್ಳುವಂತವರಾಗಬೇಕು ಎಂದು ಕಿವಿಮಾತು ಹೇಳಿದ ಕೆ.ಜಿ. ಬೋಪಯ್ಯ ಆಧುನಿಕ ಯುಗದಲ್ಲಿ ಬೇರೆಲ್ಲಾ ಕ್ರೀಡೆಗಳು ಉನ್ನತ್ತಿಗೆ ಏರುವಂತೆ ಗ್ರಾಮೀಣ ಕ್ರೀಡೆಗಳು ಸಹ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಅಭಿವೃದ್ದಿಗೊಳ್ಳಬೇಕು. ಈಗಾದಲ್ಲಿ ಮಾತ್ರ ಕೊಡಗು ಕ್ರೀಡೆಯ ತವರೂರು ಎಂದು ಕರೆಸಿಕೊಳ್ಳುವಲ್ಲಿ ಅರ್ಥವಿದೆ ಎಂದು ಒತ್ತಿ ಹೇಳಿದರು.
ವೇದಿಕೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಕೊಂಡ ವಿಜು ಸುಬ್ರಮಣಿ, ಜಿ.ಪಂ. ಕೆ.ಡಿ.ಪಿ. ಸದಸ್ಯರಾದ ಕೆ.ಎಂ.ಸರ ಚಂಗಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಸ್. ಸುರೇಶ್ ಬೆಂಗಳೂರಿನ ಉದ್ಯಮಿ ಕರ್ತಮಾಡ ದಿಲೀಪ್ ಪೂಣಚ್ಚ, ಗದ್ದೆ ಮಾಲೀಕರಾದ ಕುಪ್ಪಂಡ ಅಯ್ಯಪ್ಪ, ಬಿಟ್ಟಂಗಾಲ ಗ್ರಾ.ಪಂ. ಸದಸ್ಯ ಬೊಪ್ಪಂಡ ವಸಂತ್, ಪಾಲಿಬೆಟ್ಟ ಗ್ರಾ.ಪಂ. ಸದಸ್ಯ ದೀಪಕ್, ಬಿಟ್ಟಂಗಾಲದ ಚೊಟ್ಟೆಮಂಡ ಬಿಪಿನ್, ಪೊನ್ನಂಪೇಟೆ ನಿಸರ್ಗ ಜೇಸಿಸ್‌ನ ನಿಕಟ ಪೂರ್ವ ಅಧ್ಯಕ್ಷ ಬಿ.ಈ. ಕಿರಣ್, ಪೂರ್ವಾಧ್ಯಕ್ಷ ಮುಕ್ಕಾಟಿರ ಸಂದೀಪ್ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ನಿಸರ್ಗ ಜೇಸಿಸ್‌ನ ಅಧ್ಯಕ್ಷರಾದ ಎ.ಎಸ್. ಟಾಟು ಮೊಣ್ಣಪ್ಪ ವಹಿಸಿದ್ದರು.
ಬಹುಮಾನ ವಿಜೇತರು
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವಿರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ನಿವೃತ್ತ ಮೇ.ಜ. ಕೆ.ಪಿ.ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ನಡೆದ 5ನೇ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡಾಕೂಟ- 2017ರ ಭಾಗವಾಗಿ ನಡೆದ ಓಟದ ಸ್ಪರ್ದೆಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ನೂರಕ್ಕೂ ಮೀರಿದ ಸ್ಪರ್ಧಾಳುಗಳು ಭಾಗವಹಿಸಿ ಕ್ರೀಡಾ ಪ್ರೇಮ ಮೆರೆದರು.
ಕ್ರೀಡಾಕೂಟದ ಪುರುಷರ ವಿಭಾಗದ ಮುಕ್ತ ಓಟದ ಸ್ಪರ್ಧೆಯಲ್ಲಿ ಕುಂಜಿಲದ ಮಜೀದ್ ಪ್ರಥಮ, ಚೇಲಾವರದ ಗಗನ್ ದ್ವಿತೀಯ ಮತ್ತು ಗೋಣಿಕೊಪ್ಪಲಿನ ಅರುಣ್ ತೃತೀಯ ಬಹುಮಾನ ಪಡೆದರು.
ಮಹಿಳೆಯರ ವಿಭಾಗದ ಮುಕ್ತ ಓಟದ ಸ್ಪರ್ಧೆಯಲ್ಲಿ ಬಿ.ಶೆಟ್ಟಿಗೇರಿಯ ಲಸಿತಾ ಗಣಪತಿ ಪ್ರಥಮ, ಬಿಟ್ಟಂಗಾಲದ ಎಸ್.ಹೆಚ್. ಸುಪ್ರಿಯಾ ದ್ವಿತೀಯ ಹಾಗೂ ಬಿ.ವಿ. ನವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.
1ನೇ ತರಗತಿಯಿಂದ 5ನೇ ತರಗತಿವರೆಗಿನ ಸಬ್ ಜೂನಿಯರ್ ಬಾಲಕರ ಓಟದ ಸ್ಪರ್ಧೆಯಲ್ಲಿ ಹಾತೂರು ಜಿ.ಎಂ.ಪಿ. ಶಾಲೆಯ ಮನೋಜ್ ಪ್ರಥಮ, ಹೆಗ್ಗಳ ಜಿ.ಎಂ.ಪಿ. ಶಾಲೆಯ ಕೌಶಿಕ್ ದ್ವಿತೀಯ, ಅರುವತ್ತೋಕ್ಲು ಸರ್ವದೈವತಾ ಶಾಲೆಯ ಅರವಿನ್ ಮಾಚಯ್ಯ ತೃತೀಯ, ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ಪ್ರಗತಿ ಶಾಲೆಯ ಮಾನ್ಯ ಮುತ್ತಮ್ಮ ಪ್ರಥಮ, ಗೋಣಿಕೊಪ್ಪಲು ಲಯನ್ಸ್ ಶಾಲೆಯ ನಿಶಿರಾ ಮೊಣ್ಣಪ್ಪ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡರು.
6ನೇ ತರಗತಿಯಿಂದ 9ನೇ ತರಗತಿವರೆಗಿನ ಜೂನಿಯರ್ ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪಲು ಸಂತ ಥೋಮಸ್ ಶಾಲೆಯ ಜಿಜಿತ್ ಪ್ರಥಮ, ಹಾತೂರು ಪ್ರೌಢಶಾಲೆಯ ಗಿರೀಶ್ ದ್ವಿತೀಯ ಮತ್ತು ಅರಮೇರಿ ಎಸ್.ಎಂ.ಎಸ್. ಶಾಲೆಯ ಅಭಿಷೇಕ್ ಮುತ್ತಣ್ಣ ತೃತೀಯ, ಬಾಲಕೀಯರ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಗಾನವಿ ಬೋಪಣ್ಣ ಪ್ರಥಮ, ವಿರಾಜಪೇಟೆ ಕಾವೇರಿ ಶಾಲೆಯ ಗಾಯನ ಬೋಪಣ್ಣ ದ್ವಿತೀಯ, ಗೋಣಿಕೊಪ್ಪಲು ಲಯನ್ಸ್ ಶಾಲೆಯ ಕ್ಷೀರಾ ಮೊಣ್ಣಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
10ರಿಂದ ದ್ವಿತೀಯ ಪಿ.ಯು.ಸಿ.ವರೆಗಿನ ಸೀನಿಯರ್ ಬಾಲಕರ ವಿಭಾಗದಲ್ಲಿ ಮೂರ್ನಾಡು ಪಧವಿ ಪೂರ್ವ ಕಾಲೇಜಿನ ಶಫೀಕ್ ಪ್ರಥಮ, ಹಾತೂರು ಪ್ರೌಢಶಾಲೆಯ ಶರತ್ ದ್ವಿತೀಯ, ಮೂರ್ನಾಡು ಪಧವಿ ಪೂರ್ವ ಕಾಲೇಜಿನ ಸುಹೈಬ್ ತೃತೀಯ, ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಎನ್.ಎನ್. ನಿಕಿತಾ ಪ್ರಥಮ, ಪ್ರಿಯಾ ದ್ವಿತೀಯ ಮತ್ತು ಟಿ. ಎಸ್. ಮೇಘನಾ ತೃತೀಯ ಬಹುಮಾನ ಪಡೆದುಕೊಂಡರು.
ವಿಜೇತರಿಗೆ ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಮಳೆನೀರು ಕೊಯ್ಲು ತಜ್ಞ ಅಜ್ಜಿಕುಟ್ಟಿರ ಸೂರಜ್, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಎಸ್. ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ವಿರಾಜಪೇಟೆ ತಾಲೂಕು ಘಟಕ ಅಧ್ಯಕ್ಷ ಕೆ.ಎನ್. ಸಂದೀಪ್ ಸೇರಿದಂತೆ ಪ್ರಮುಖರು ಬಹುಮಾನ ವಿತರಿಸಿ ಶುಭ ಹಾರೈಸಿದರು.







