ಮದ್ಯದ ಅಮಲಿನಲ್ಲಿ ಪಿಎಸ್ಸೈಗೆ ಢಿಕ್ಕಿ ಹೊಡೆದ ಬೈಕ್ ಸವಾರ
ಬೆಂಗಳೂರು, ಜು.30: ಮದ್ಯ ಸೇವಿಸಿದ ಬೈಕ್ ಸವಾರನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಶರವೇಗವಾಗಿ ಬಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರಿಗೆ ಢಿಕ್ಕ್ಕಿ ಹೊಡೆದಿರುವ ಘಟನೆ ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬಾಗಲಗುಂಟೆ ಬಳಿಯ ಆಚಾಯ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತರಬೇತಿಯಲ್ಲಿರುವ ಪಿಎಸ್ಸೈ ನವೀನ್ ಕುಮಾರ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ರೀತಿ, ಮದ್ಯದ ಅಮಲಿನಲ್ಲಿ ಢಿಕ್ಕಿ ಹೊಡೆದ ನಗರದ ಅಬ್ಬಿಗೆರೆಯ ಪುನೀತ್ ಎಂಬಾತನ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಆಚಾರ್ಯ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ಪಿಎಸ್ಸೈ ನವೀನ್ ಕುಮಾರ್ ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬೈಕ್‌ನಲ್ಲಿ ಬಂದ ಪುನೀತ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಎಡಗಡೆಗೆ ಹೋಗುವ ಬದಲು ಬಲಗಡೆ ಬ್ಯಾರಿಕೇಡ್ ಹಾಕಿಕೊಂಡು ನಿಂತಿದ್ದ ನವೀನ್ ಕುಮಾರ್‌ಗೆ ಢಿಕ್ಕಿ ಹೊಡೆದು ಕೆಳೆಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಇಬ್ಬರನ್ನು ಸ್ಥಳದಲ್ಲಿದ್ದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ನೇಹಿತನ ಮನೆಗೆ ಹೋಗಿದ್ದ ಪುನೀತ್, ಮದ್ಯ ಸೇವಿಸಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಗುಣಮುಖನಾದ ನಂತರ ಪುನೀತ್‌ನನ್ನು ಬಂಧಿಸಿ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







