ವಾಮಮಾರ್ಗದ ಮೂಲಕ ರಾಷ್ಟ್ರದ ಕೇಸರೀಕರಣಕ್ಕೆ ಬಿಜೆಪಿ ಯತ್ನ: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಜು, 30: ಪ್ರಧಾನಿ ಮೋದಿ ಅವರು ರಾಷ್ಟ್ರದ ಎಲ್ಲ ರಾಜ್ಯಗಳನ್ನು ಬಿಜೆಪಿಯ ವಶಕ್ಕೆ ತೆಗೆದುಕೊಳ್ಳಲು ಹೊರಟಿದ್ದು, ವಾಮಮಾರ್ಗದ ಮೂಲಕ ರಾಷ್ಟ್ರವನ್ನು ಕೇಸರೀಕರಣ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಡೆದು ಬಿಜೆಪಿ ರಾಜಕಾರಣ ಮಾಡಿದೆ. 1972ರಲ್ಲಿ ಜನತೆ ಆದೇಶದ ಮೇಲೆ ತಮಿಳುನಾಡು ಹೊರತುಪಡಿಸಿ ಎಲ್ಲ ರಾಜ್ಯಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿತ್ತು ಎಂದು ಸ್ಮರಿಸಿದರು.
ಇದೀಗ ಅದೇ ರೀತಿಯಲ್ಲಿ ಪ್ರಧಾನಿ ಮೋದಿ ವಾಮಮಾರ್ಗದ ಮೂಲಕ ರಾಜಕೀಯ ಮಾಡುತ್ತಿದ್ದು, ರಾಜ್ಯಸಭೆಯ ಒಂದು ಸೀಟಿಗಾಗಿ ಬಿಜೆಪಿ ಇಷ್ಟೆಲ್ಲಾ ಕಸರತ್ತು ನಡೆಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ದೇವೇಗೌಡ, ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕಾರಣಕ್ಕೆ ತನ್ನ ಸಹಮತ ಇಲ್ಲ ಎಂದು ನುಡಿದರು.
ಕೂಡಲ ಸಂಗಮದ ನಿರ್ಣಯಕ್ಕೆ ಬದ್ಧ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಪಟ್ಟಂತೆ ಕೂಡಲ ಸಂಗಮದಲ್ಲಿ ಎಲ್ಲ ಪೀಠಾಧ್ಯಕ್ಷರು ಸೇರುತ್ತಿದ್ದು, ಆ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಈ ವಿಷಯದಲ್ಲಿ ಸ್ವಂತ ಹೇಳಿಕೆ ಏನೂ ಇಲ್ಲ ಎಂದು ದೇವೇಗೌಡ ಸ್ಪಷ್ಟನೆ ನೀಡಿದರು.
ನಾನು ಯಾವುದೇ ಕಾರಣಕ್ಕೂ ಮನೆಯಲ್ಲಿ ಕೂರುವುದಿಲ್ಲ. ಕಾಯಕವೇ ಕೈಲಾಸ ಎಂದು ನಂಬಿದ್ದು, ಕೆಲಸ ಮಾಡೋದು ನನ್ನ ಜವಾಬ್ದಾರಿ, ಪ್ರತಿಫಲ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆ ಸಂಬಂಧ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.







