ಬಸವಣ್ಣನ ಸಮಾನತೆ, ಆದರ್ಶ ಕಾಂಗ್ರೆಸ್‌ನಲ್ಲಿದೆ: ಕೃಷ್ಣಭೈರೇಗೌಡ

ಬೆಂಗಳೂರು, ಜು.30: ಕ್ರಾಂತಿಯೋಗಿ ಬಸವಣ್ಣ ಅವರ ಸಮಾನತೆ ಆದರ್ಶ ಕಾಂಗ್ರೆಸ್ ಪಕ್ಷದಲ್ಲಿದ್ದು, ದಶಕಗಳಿಂದಲೂ ಜಾತ್ಯತೀತ ಮನೋಭಾವ ಬೆಳಸಿಕೊಂಡು ಬರಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಸರ್ವರಿಗೆ ಸಮಪಾಲು ಸರ್ವರಿಗೂ ಸಮಬಾಳು ತತ್ವದ ಆಚರಣೆಯನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದು, ಕೆಂಪೇಗೌಡರು, ಬಸವಣ್ಣ, ಬುದ್ಧ, ಕನಕದಾಸ, ವಾಲ್ಮೀಕಿ, ಮೈಸೂರು ಹುಲಿ ಟಿಪ್ಪುಸುಲ್ತಾನ್ ಸೇರಿ ಧರ್ಮಾತೀತವಾದ ಮಹಾಪುರುಷರ ಜಯಂತಿ ಆಚರಿಸುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದು ತಿಳಿಸಿದರು.
ಇತ್ತೀಚೆಗೆ ಬಿಜೆಪಿ ನಾಯಕರು ದಲಿತರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದ್ದು, ಬಿಜೆಪಿ ನಾಯಕರು ಮತಗಳಿಕೆಯ ಏಕೈಕ ಕಾರಣಕ್ಕಾಗಿ ದಲಿತರ ಓಲೈಕೆಗಿಳಿದಿರುವುದು ಹಾಸ್ಯಾಸ್ಪದವಾಗಿದೆ ಎಂದ ಅವರು, ಕೋಮುವಾದಿ ಬಿಜೆಪಿಯವರಿಗೆ, ಜಾತಿ ಹಾಗೂ ಧರ್ಮಾತೀತವಾದ ಮಹಾಪುರುಷರಂತಹ ಜಯಂತಿಗಳನ್ನು ಆಚರಿಸುವ ಯಾವ ನೈತಿಕತೆಯೂ ಇಲ್ಲ ಎಂದು ಕೃಷ್ಣಭೈರೇಗೌಡ ಕಿಡಿಕಾರಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಅಭಿವೃದ್ಧಿ, ಸೌಕರ್ಯಗಳ ವಿಷಯದಲ್ಲಿ ಭಾರತದಲ್ಲಿಯೇ ಬೆಂಗಳೂರಿಗೆ ಹೆಗ್ಗಳಿಕೆಯ ಹೆಸರಿದೆ. ಇದೇ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ವಿಶ್ವದ ಹಲವು ರಾಷ್ಟ್ರಗಳ ಗಣ್ಯ ಉದ್ಯಮಿಗಳನ್ನು ಆಹ್ವಾನಿಸಿ ಇನ್‌ವೆಸ್ಟ್ ಇಂಡಿಯಾ ಬಂಡವಾಳ ಹೂಡಿಕೆಯ ಸಮಾವೇಶವನ್ನು ನಡೆಸಿದರು. ಟೀಕೆ ಮಾಡುವವರು, ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ಬೆಂಗಳೂರಿನಲ್ಲಿಯೇ ಈ ಸಮಾವೇಶವನ್ನು ಏಕೆ ಮಾಡಿದರು ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಸುಮಾರು 500 ವರ್ಷಗಳ ಹಿಂದೆಯೇ ಪ್ರತಿ ವೃತ್ತಿಯವರಿಗೆ ಪ್ರತ್ಯೇಕವಾದ ನಗರವನ್ನು ನಿರ್ಮಿಸುವ ಮೂಲಕ ಸುಸಜ್ಜಿತ ಬೆಂಗಳೂರು ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಸ್ಥಳಗಳನ್ನು ರಕ್ಷಣೆ ಮಾಡಿ ಅವರ ಇತಿಹಾಸ ಹಾಗೂ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಅಧ್ಯಕ್ಷೆ ಜ್ಯೋತಿ ಕಲ್ಲೇಶ್, ಬೆಂ.ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್‌ಕುಮಾರ್, ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲ್, ಎನ್. ಎನ್.ಶ್ರೀನಿವಾಸಯ್ಯ, ಶಿವರಾಜ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.







