ಬೆಂಗಳೂರಿನಲ್ಲಿ ಮೇಳೈಸಿದ ಕೊಡವ ಸಾಹಿತ್ಯ, ಸಾಂಸ್ಕೃತಿಕ ಸಂಗಮದ ಮೆರಗು

ಮಡಿಕೇರಿ ಜು.30 : ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮತ್ತು ಬೆಂಗಳೂರಿನ ದಾಸರಳ್ಳಿಯ ಕೊಡವ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ದಾಸರಳ್ಳಿಯ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಜರುಗಿತು.
ವಿಧಾನಸಭಾ ಸದಸ್ಯರಾದ ಮುನಿರಾಜು, ಕುಶಾಲತೋಪನ್ನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯರಾದ ಬಿದ್ದಂಡ ಟೈಗರ್ ಅಶೋಕ್ ಕುಮಾರ್, ಕೊಡವ ಸಮುದಾಯ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಪೊರೇಟರ್ ಉಮಾದೇವಿ ಮಾತನಾಡಿ, ರಾಜಕೀಯವಾಗಿ ಕೊಡವರು ತಮಗೆ ನೀಡಿದ ಬೆಂಬಲಕ್ಕೆ ಚಿರಋಣಿ ಎಂದರು.
ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಅಕಾಡೆಮಿಯ ಮೂರು ವರ್ಷದ ಆಡಳಿತಾವಧಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಕಳೆದ ಮೂರು ವರ್ಷಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.
ಪ್ರೊ.ಇಟ್ಟಿರ ಬಿದ್ದಪ್ಪ ರಚಿಸಿದ ಪುಸ್ತಕವನ್ನು ಬೆಂಗಳೂರಿನ ಖ್ಯಾತ ವಕೀಲರಾದ ಮುಕ್ಕಾಟಿರ ನಾಣಯ್ಯ ಬಿಡುಗಡೆಗೊಳಿಸಿದರು. ಕಲ್ಮಾದಂಡ ಯಶಸ್ವಿನಿ ಪ್ರಾರ್ಥಿಸಿದರು, ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಮಾದೇಟಿರ ಬೆಳ್ಳಿಯಪ್ಪ ನಿರೂಪಿಸಿ, ಸಂಘದ ಕಾರ್ಯದರ್ಶಿ ವಿನುಕುಮಾರ್ ವಂದಿಸಿದರು.







