1966ರ ಏರ್‌ಇಂಡಿಯಾ ಅಪಘಾತದಲ್ಲಿ ಸಿಐಎ ಕೈವಾಡ..?
ಭೀಕರ ಅವಘಡದಲ್ಲಿ ಬಲಿಯಾಗಿದ್ದರು ಹೋಮಿ ಭಾಭಾ

ಮುಂಬೈ, ಜು.30: 1966ರಲ್ಲಿ ಸಂಭವಿಸಿದ ಏರ್‌ಇಂಡಿಯಾ ವಿಮಾನ ಅಪಘಾತದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಭಾರತದ ಪರಮಾಣು ಕಾರ್ಯಕ್ರಮದ ಮುಖ್ಯಸ್ಥ ರಾಗಿದ್ದ ಹೋಮಿ ಜಹಾಂಗಿರ್ ಭಾಭಾ ಮೃತಪಟ್ಟಿದ್ದರು. ಆಸ್ಟ್ರಿಯಾದ ವಿಯೆನ್ನದಲ್ಲಿ ನಡೆಯಲಿದ್ದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಭಾಭಾ ಪ್ರಯಾಣಿಸುತ್ತಿದ್ದ ವಿಮಾನ ಸ್ವಿಝರ್‌ಲ್ಯಾಂಡಿನ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿತ್ತು.
2008ರ ಜುಲೈ 11ರಂದು ಪತ್ರಕರ್ತ ಗ್ರೆಗರಿ ಡಗ್ಲಸ್ ಮತ್ತು ಸಿಐಎ ಅಧಿಕಾರಿ ರಾಬರ್ಟ್ ಕ್ರಾವ್ಲೆ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯನ್ನು ಟಿಆರ್‌ಬಿನ್ಯೂಸ್.ಒಆರ್‌ಜಿ ಎಂಬ ಸುದ್ದಿಮಾಧ್ಯಮದಲ್ಲಿ ಮರುರೂಪಿಸಲಾಗಿದ್ದು ಈ ಸಂಭಾಷಣೆ ಗಮನಿಸಿದರೆ ಏರ್‌ಇಂಡಿಯಾ ಅಪಘಾತದಲ್ಲಿ ಸಿಐಎ ಕೈವಾಡ ಇದೆಯೇ ಎಂಬ ಶಂಕೆ ಬಲವಾಗುತ್ತದೆ. ಸಂಭಾಷಣೆ ಆರಂಭಿಸುವ ಸಿಐಎ ಅಧಿಕಾರಿ- ನಮಗೊಂದು ಸಮಸ್ಯೆ ಎದುರಾಗಿದೆ, ನಿನಗೆ ಗೊತ್ತಿರಬಹುದು.
1960ರ ವಿಷಯವಿದು. ಭಾರತವು ದುರಹಂಕಾರದಿಂದ ಅಣುಬಾಂಬ್ ತಯಾರಿಸಲು ಮುಂದಾಗಿತ್ತು. ಅವರಿಗೆ ರಶ್ಯದ ಬೆಂಬಲವಿತ್ತು- ಎಂದು ಹೇಳುತ್ತಾನೆ. ಮಾತು ಮುಂದುವರಿಸಿದ ಆತ, ಆ ವ್ಯಕ್ತಿ(ಹೋಮಿ ಭಾಭಾ) ತುಂಬಾ ಅಪಾಯಕಾರಿ. ನನ್ನ ಮಾತನ್ನು ನಂಬು. ಆದರೆ ದುರದೃಷ್ಟಕರ ರೀತಿಯಲ್ಲಿ ಆತ ಅಪಘಾತದಲ್ಲಿ ಮೃತಪಟ್ಟ. ವಿಯೆನ್ನ ಸಭೆಯಲ್ಲಿ ಆತ ಭಾಗವಹಿಸಿದ್ದರೆ ಮತ್ತಷ್ಟು ಸಮಸ್ಯೆಯಾಗುತ್ತಿತ್ತು. ಆದರೆ ಆತ ಪ್ರಯಾಣಿಸುತ್ತಿದ್ದ ಬೋಯಿಂಗ್ 707 ವಿಮಾನದ ಸರಕು ವಿಭಾಗದಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡು ವಿಮಾನ ಅಪಘಾತಕ್ಕೀಡಾಯಿತು ಎಂದು ಹೇಳುತ್ತಾನೆ. ತನಗೆ ಮುಂದುವರಿಯಲು ಅನುಮತಿ ದೊರೆತರೆ, ಭಾರತವು 18 ತಿಂಗಳೊಳಗೆ ಪರಮಾಣು ಬಾಂಬ್ ನಿರ್ಮಿಸುವ ಸಾಮರ್ಥ್ಯ ಪಡೆಯಲಿದೆ ಎಂದು 1965ರ ಅಕ್ಟೋಬರ್‌ನಲ್ಲಿ ಆಕಾಶವಾಣಿಯಲ್ಲಿ ಮಾಡಿದ ಭಾಷಣದಲ್ಲಿ ಹೋಮಿ ಭಾಭಾ ಹೇಳಿದ್ದರು.
ಭಾರತವು ಬಲಿಷ್ಠ ರಾಷ್ಟ್ರವೆಂದು ಪರಿಗಣಿಸಲ್ಪಡಲು ಪರಮಾಣು ಶಕ್ತ ರಾಷ್ಟ್ರವಾಗಬೇಕು ಎಂದು ಮನಗಂಡಿದ್ದ ಭಾಭಾ, ಶಾಂತಿಯ ಉದ್ದೇಶಕ್ಕಾಗಿ ಭಾರತವು ಪರಮಾಣು ಕಾರ್ಯಕ್ರಮ ಆರಂಭಿಸಬೇಕು ಎಂದು ಆಶಿಸಿದ್ದರು. ಇದರ ಜೊತೆಗೆ ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಪರಮಾಣು ಬಾಂಬ್ ಹೊಂದಿರಬೇಕು ಎಂಬ ರಹಸ್ಯ ಉದ್ದೇಶವನ್ನೂ ಹೋಮಿ ಭಾಭಾ ಹೊಂದಿದ್ದರು ಎಂದು ಗುರುತು ಬಹಿರಂಗಪಡಿಸಲು ಬಯಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಭಾಭಾ ವಿಮಾನ ಅಪಘಾತದಲ್ಲಿ ಮೃತಪಟ್ಟರೂ, 1974ರ ಮೇ 18ರಂದು ಪೋಖರನ್‌ನಲ್ಲಿ ‘ನಗುವ ಬುದ್ಧ’ ಎಂಬ ಹೆಸರಲ್ಲಿ ಭಾರತವು ತನ್ನ ಪ್ರಪ್ರಥಮ ಅಣುಬಾಂಬ್ ಪರೀಕ್ಷೆ ನಡೆಸುವುದರೊಂದಿಗೆ ಭಾಭಾ ಅವರ ಕನಸು ನನಸಾಗಿತ್ತು.







