ಉದ್ಘಾಟನೆಗೊಂಡು ನಿಮಿಷಗಳಲ್ಲಿ ಅಶ್ರಫ್ ಕಲಾಯಿ ಸ್ಮರಣಾರ್ಥ ಬಸ್ ನಿಲ್ದಾಣದ ನಾಮಫಲಕ ತೆರವು
ಸರ್ವಧರ್ಮೀಯರಿಂದ ತೆರವಿಗೆ ವಿರೋಧ

ಸ್ಥಳೀಯಾಡಳಿತದಿಂದ ಅನುಮತಿ ಪಡೆಯದ ಹಿನ್ನೆಲೆ
ಬಂಟ್ವಾಳ, ಜು.30: ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಅಶ್ರಫ್ ಕಲಾಯಿ ಸ್ಮರಣಾರ್ಥವಾಗಿ ನಿರ್ಮಿಸಲಾಗಿದ್ದ ಸಾರ್ವಜನಿಕ ಬಸ್ ತಂಗುದಾಣವನ್ನು ಪೊಲೀಸ್ ಭದ್ರತೆಯೊಂದಿಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತೆರವುಗೊಳಿಸಿದ ಘಟನೆ ರವಿವಾರ ನಡೆಯಿತು.
ಜೂನ್ 21ರಂದು ದುಷ್ಕರ್ಮಿಗಳಿಂದ ಹತ್ಯೆಯಾದ ರಿಕ್ಷಾ ಚಾಲಕ, ಎಸ್‍ಡಿಪಿಐ ಮುಖಂಡ ಅಶ್ರಫ್ ಕಲಾಯಿರವರ ಸ್ಮರಣಾರ್ಥವಾಗಿ ಅವರ ಸಹೋದರರು ಕಲಾಯಿಯಲ್ಲಿ ಸಾರ್ವಜನಿಕ ಬಸ್ ತಂಗುದಾನವನ್ನು ನಿರ್ಮಿಸಿದ್ದರು. ರವಿವಾರ ಬೆಳಗ್ಗೆ ಈ ಬಸ್ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ನಡೆದ ಕೆಲವೇ ನಿಮಿಷಗಳ ನಂತರ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಬಂಟ್ವಾಳ ತಹಶೀಲ್ದಾರ್ ಬಸ್ ತಂಗುದಾಣ ನಿರ್ಮಾಣಕ್ಕೆ ಸ್ಥಳೀಯಾಡಳಿತದಿಂದ ಅನುಮತಿ ಪಡೆಯದ ಕಾರಣ ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಅಶ್ರಫ್ ಸಹೋದರರು, ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು, ಅಶ್ರಫ್ ಹತ್ಯೆಯಾಗಿ 40ನೆ ದಿನದ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ತುರ್ತಾಗಿ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು ಗ್ರಾಮ ಪಂಚಾಯತ್‍ಗೆ ಮೌಖಿಕ ಹೇಳಿಕೆ ನೀಡಲಾಗಿದೆ. ಇಂದು ರವಿವಾರವಾಗಿದ್ದರಿಂದ ನಾಳೆ ಅನುಮತಿ ಪಡೆಯುತ್ತೇವೆ ಎಂದು ಹೇಳಿದರು.
ಆದರೆ ಇದಕ್ಕೆ ಒಪ್ಪದ ತಹಶೀಲ್ದಾರ್, ಅನುಮತಿ ಪಡೆಯದ ಬಗ್ಗೆ ಜಿಲ್ಲಾಧಿಕಾರಿಗೆ ಯಾರೋ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಯ ಸೂಚನೆಯಂತೆ ನಾನು ಬಂದಿದ್ದೇನೆ. ಈಗ ತೆರವುಗೊಳಿಸಿ. ಗ್ರಾಮ ಪಂಚಾಯತ್‍ನಿಂದ ಅನುಮತಿ ಪಡೆದ ಬಳಿಕ ನಿರ್ಮಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಸ್ಥಳದಲ್ಲಿ ವಿವಿಧ ಧರ್ಮದ, ಪಕ್ಷದ ಮುಖಂಡರು ಜಮಾಯಿಸಿ ಬಸ್ ನಿಲ್ದಾಣ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಅಶ್ರಫ್ ಮಾಡಿದ್ದ ಸಮಾಜ ಸೇವೆಯ ನೆನಪಿಗಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಅವರ ಹೆಸರಿನೊಂದಿಗೆ ಇಲ್ಲಿ ಇರಬೇಕು. ಬಸ್ ನಿಲ್ದಾಣಕ್ಕೆ ಊರಿನ ಯಾವುದೇ ಧರ್ಮದ, ಪಕ್ಷದವರ ವಿರೋಧವೂ ಇಲ್ಲ. ತುರ್ತಾಗಿ ನಿರ್ಮಿಸಿರುವುದರಿಂದ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ನಾಳೆ ಅನುಮತಿ ಪಡೆಯುತ್ತೇವೆ. ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಹಠ ಹಿಡಿದರು.
ಬಳಿಕ ಸ್ಥಳಕ್ಕೆ ಬಂಟ್ವಾಳ ಉಪವಿಭಾಗದ ಎಎಸ್ಪಿ ಡಾ. ಅರುಣ್ ಕೆ., ಗ್ರಾಮಾಂತರ ಎಸ್ಸೈ ಉಮೇಶ್ ಮೊದಲಾದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಬಸ್‍ನಿಲ್ದಾಣಕ್ಕೆ ಅಳವಡಿಸಿದ್ದ ಅಶ್ರಫ್ ಕಲಾಯಿ ಹೆಸರಿರುವ ನಾಮಫಲಕವನ್ನು ತೆರವುಗೊಳಿಸಿ, ಅನುಮತಿ ಪಡೆದ ಬಳಿಕ ನಾಮ ಫಲಕವನ್ನು ಅಳವಡಿಸಿ ಎಂದರು. ಕೊನೆಗೆ ನಾಮಫಲಕವನ್ನು ತೆರವುಗೊಳಿಸಲಾಯಿತು.
ಇಲ್ಲಿಗೆ ಬಸ್ ನಿಲ್ದಾಣ ಬೇಕು. ಅದು ಅಶ್ರಫ್ ಹೆಸರಿನಲ್ಲಿ ಆಗಿರುವುದು ಸಂತೋಷದ ಸಂಗತಿ. ಅಶ್ರಫ್ ಏನು ಎಂದು ಇಲ್ಲಿನ ಎಲ್ಲರಿಗೂ ಗೊತ್ತಿದೆ. ಬಸ್ಸು ನಿಲ್ದಾಣದಿಂದ ಯಾರಿಗೂ ಸಮಸ್ಯೆ ಇಲ್ಲ. ಬಸ್ ನಿಲ್ದಾಣಕ್ಕೆ ಅಶ್ರಫ್ ಹೆಸರೇ ಬೇಕು ಮತ್ತು ಅದನ್ನು ತೆರವುಗೊಳಿಸಲು ಬಿಡುವುದಿಲ್ಲ.
- ಜನಾರ್ದನ, ಸ್ಥಳೀಯ ಮುಖಂಡ
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಹಿತ ಒಳ ರಸ್ತೆಗಳಲ್ಲಿ ಹಲವರ ಸ್ಮರಣಾರ್ಥವಾಗಿ ನಿರ್ಮಾಣವಾಗಿರುವ ಹೆಚ್ಚಿನ ಬಸ್ ನಿಲ್ದಾಣಕ್ಕೆ ಅನುಮತಿಯೇ ಇಲ್ಲ. ಜಿಲ್ಲಾಧಿಕಾರಿಗೆ ದೂರು ಹೋಗಿದೆ ಎಂದು ಬಸ್ ನಿಲ್ದಾಣವನ್ನು ತೆರವುಗೊಳಿಸಲು ಬಂದಿರುವ ಅಧಿಕಾರಿಗಳಲ್ಲಿ ದೂರು ನೀಡಿದವರು ಯಾರು, ದೂರು ಏನು? ಎಂಬ ಮಾಹಿತಿ ಇಲ್ಲ. ದೂರಿನ ಪ್ರತಿಯೂ ಅವರ ಬಳಿ ಇಲ್ಲ. ಬಸ್ ನಿಲ್ದಾಣಕ್ಕೆ ಊರಿನ ಯಾವುದೇ ಜಾತಿ, ಧರ್ಮ, ಪಕ್ಷದವರ ವಿರೋಧ ಇಲ್ಲ ಎಂದ ಮೇಲೆ ಉದ್ಘಾಟನೆಗೊಂಡ ದಿನವೇ ತೆರವುಗೊಳಿಸುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ.
- ಶಾಹುಲ್ ಹಮೀದ್, ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ
ಸಮಾಜ ಸೇವಕ ಅಶ್ರಫ್ ಕಲಾಯಿಯವರ ಸ್ಮರಣಾರ್ಥವಾಗಿ ನಿರ್ಮಿಸಿದ್ದ ಬಸ್ ತಂಗುದಾಣವನ್ನು ತೆರವುಗೊಳಿಸುವುದು ಬೇಸರದ ಸಂಗತಿ. ಬಸ್ ನಿಲ್ದಾಣದಲ್ಲಿ ಯಾವುದೇ ಪ್ರಚೋದನಕಾರಿ ಅಂಶ ಇಲ್ಲ. ಅನುಮತಿ ಪಡೆದು ಬಸ್ ನಿಲ್ಸಾಣವನ್ನು ಉಳಿಸಲಾಗುವುದು.
-ಚಂದ್ರಶೇಖರ ಭಂಡಾರಿ, ಮಾಜಿ ಗ್ರಾಪಂ ಅಧ್ಯಕ್ಷ
ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಸೂಚನೆಯಂತೆ ಸ್ಥಳಕ್ಕೆ ಬಂದಿದ್ದೇನೆ. ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸುವುದು ಕಾನೂನು ಬಾಹಿರ. ಅನುಮತಿ ಪಡೆದು ಬಸ್ ನಿಲ್ದಾಣ ನಿರ್ಮಿಸಿದರೆ ಯಾವುದೇ ಗೊಂದಲ ಇಲ್ಲ.
- ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್







