ಜಿಎಸ್‌ಟಿಯಿಂದ ಕೆಟ್ಟ ದಿನಗಳ ಅನುಭವ: ಕುಮಾರಸ್ವಾಮಿ
ವಿಶ್ವಕರ್ಮ ಸಮಾಜದ ಬಲವರ್ಧನಾ ಸಮಾವೇಶ ಉದ್ಘಾಟನೆ

ಕಾಪು, ಜು.30: ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ದುಡಿದ ಹಣದಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಕನಸು ಹೊತ್ತ ಹೆತ್ತವರಿಗೆ ಮೋದಿ ಸರಕಾರದಿಂದ ಕೆಟ್ಟ ದಿನಗಳ ಅನುಭವ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಟಪಾಡಿಯ ವೇಣುಗಿರಿ ಶ್ರೀಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ ವಿಶ್ವಕರ್ಮ ಸಮಾಜದ ಬಲವರ್ಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿರುವ ವಿಶ್ವಕರ್ಮ ಸಮುದಾಯವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ರೀತಿಯಲ್ಲೂ ಕಡೆಗಣಿಸಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿಶ್ವಕರ್ಮ ಸಮುದಾಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಎಲ್ಲಾ ಸಮುದಯದಲ್ಲಿರುವ ಬಡವರಿಗಾಗಿ ಯೊಜನೆ ರೂಪಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಆದರೆ ಅದನ್ನು ಮರೆತಿದೆ. ಕರಾವಳಿ ಜಿಲ್ಲೆಗಳು ಕೋಮು ಸಂಘರ್ಷಕ್ಕೆ ತತ್ತರಿಸಿ ಹೋಗಿದ್ದಾರೆ. ಜನ ಭೀತಿಯ ವಾತಾವರಣ ದಲ್ಲಿ ಬದುಕುವಂತಾಗಿದೆ. ಬಿಜೆಪಿ ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿದರೆ, ಕಾಂಗ್ರೆಸ್ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಮೂಲಕ ಸ್ಪರ್ಧಿಸಲು ಕೇಳಿಕೊಂಡಿದ್ದೆ. ಆದರೆ ಅದು ಕಾರಣಾಂತರ ದಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಪಕ್ವವಾಗಿದೆ. ಅವರು ನಮ್ಮ ಪಕ್ಷದ ಅ್ಯರ್ಥಿಯಾಗಿ ಕಣಕ್ಕಿಳಿದರೆ ಎಲ್ಲಾ ರೀತಿಯ ಸಹಕಾರ ನೀಡಲಾಗು ವುದು ಮತ್ತು ಅವರ ಗೆಲುವಿಗಾಗಿ ತಾವೆಲ್ಲರೂ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ವಹಿಸಿದ್ದರು. ಶ್ರೀಕಾಳಿಕಾಂಬ ವಿಶ್ವಕರ್ಮೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಸದಾಶಿವ ಆಚಾರ್ಯ, ಜೆಡಿಎಸ್ ವಕ್ತಾರ ಭೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಸ್ ಹಿಂದುಳಿದ ವಿಭಾಗದ ಕಾರ್ಯಾಧ್ಯಕ್ಷ ಉಮೇಶ್ ಆಚಾರ್ಯ, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸ ಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಕಪ್ಪೆಟ್ಟು, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಧ್ಯಾಪಕ ಬಾಳ್ಕಟ್ಟ ಆನಂತಯ್ಯ ಆಚಾರ್ಯ ಸ್ವಾಗತಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.







