ಘನ- ದ್ರವತ್ಯಾಜ್ಯ ನಿರ್ವಹಣೆ ಕಾರ್ಯಾಗಾರ
ಉಡುಪಿ, ಜು.30: ಘನತ್ಯಾಜ್ಯ ನಿರ್ವಹಣೆಯನ್ನು ತುರ್ತು ಅವಶ್ಯಕ ಎಂಬುದಾಗಿ ತಿಳಿದುಕೊಂಡರೆ ಮಾತ್ರ ಆ ಸಮಸ್ಯೆ ಯನ್ನು ಪರಿಹರಿಸಲು ಸಾಧ್ಯ ವಾಗುತ್ತದೆಂದು ತಮಿಳುನಾಡಿನ ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವಿಸ್‌ನ ಯೋಜನಾ ನಿರ್ದೇಶಕ ಸಿ.ಶ್ರೀನಿವಾಸನ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವಸ್ ಲಿಮೆಟೆಡ್‌ನ ಸಂಯುಕ್ತ ಆಶ್ರಯದಲ್ಲಿ ರವಿವಾರ ಮಣಿಪಾಲ ರಜತಾದ್ರಿಯ ವಾಜಪೇಯಿ ಸಭಾಂಗಣ ದಲ್ಲಿ ಆಯೋಜಿಸಲಾದ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.
ಕಸದ ನಿರ್ವಹಣೆ, ನಿಯಂತ್ರಣದ ಮಹತ್ವ ಮತ್ತು ಪುನರ್ ಬಳಕೆಯ ಬಗ್ಗೆ ನಮಗೆ ಮಾಹಿತಿಯ ಕೊರತೆ ಇದೆ. ಇದರ ಪರಿಣಾಮವಾಗಿ ಇಂದು ಹೆಚ್ಚು ಹೆಚ್ಚು ಕಸಗಳು ಸಂಗ್ರಹವಾಗುತ್ತಿವೆ. ಘನತ್ಯಾಜ್ಯವನ್ನು ಸರಿಯಾಗಿ ಬಳಸಿ ಕೊಂಡಾಗ ಸಂಪನ್ಮೂಲವನ್ನಾಗಿಸಬಹುದು ಎಂದು ಅವರು ಹೇಳಿದರು.
ತ್ಯಾಜ್ಯವನ್ನು ಸರಿಯಾಗಿ ಬಳಸಿಕೊಂಡರೆ ಸಂಪನ್ಮೂಲವಾಗುತ್ತದೆ. ಮನೆಗಳಲ್ಲಿ ದಿನಕ್ಕೆ ಎರಡು ಬಾರಿ ತ್ಯಾಜ್ಯ ಸಂಗ್ರಹ ವಾದರೆ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ದಿನಕ್ಕೆ ನಾಲ್ಕು ಬಾರಿ, ಹಣ್ಣು, ಹೂವು, ತರಕಾರಿ ಅಂಗಡಿಗಳಿಂದ ಪ್ರತಿ 4 ಗಂಟೆಗೊಮ್ಮೆ ಮತ್ತು ಮಾಂಸದಂಗಡಿಗಳಲ್ಲಿ ಪ್ರತಿ ಮೂರು ಗಂಟೆಗೊಮ್ಮೆ ತ್ಯಾಜ್ಯವನ್ನು ಸಂಗ್ರಹವಾಗುತ್ತದೆ ಎಂದು ಅವರು ತಿಳಿಸಿದರು.
ನಗರಸಭೆ ವ್ಯಾಪ್ತಿಯ 44 ಸಾವಿರ ಕುಟುಂಬಗಳು, 16 ಸಾವಿರ ಅಂಗಡಿ ಗಳು ಹಾಗೂ ವಿವಿಧ ಸಂಸ್ಥೆಗಳು ಪ್ರತಿದಿನ ಮೂರು ರೂ. ವೌಲ್ಯದ ಪ್ಲಾಸ್ಟಿಕ್ ಗಳನ್ನು ಬಳಸಿ ಎಸೆಯುತ್ತಿವೆ. ಅದನ್ನೇ ನಾವು ಸಂಪನ್ಮೂಲವಾಗಿ ಬಳಸಿಕೊಂಡರೆ ತಿಂಗಳಿಗೆ 1,17,60,000 ರೂ. ಹಾಗೂ ವರ್ಷಕ್ಕೆ 14,11,20,000 ರೂ. ಪಡೆಯಬಹುದು. ಅಲ್ಲದೇ ಇದರಿಂದ 1960 ಮಹಿಳೆಯರಿಗೆ ಉದ್ಯೋಗ ನೀಡಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಶ್ರೀನಿವಾಸ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಮೊದಲಾದರು ಉಪಸ್ಥಿತರಿದ್ದರು.







