ಹೆಣ್ಣು ಭ್ರೂಣ ಹತ್ಯೆ ತಡೆಗೆ ಬಂದ ‘ಬೈಕಿಂಗ್ ಕ್ವೀನ್ಸ್’

ಬೆಂಗಳೂರು, ಜು. 31: ಹೆಣ್ಣು ಭ್ರೂಣ ಹತ್ಯೆ ತಡೆ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಮಹಿಳಾ ಸಬಲೀಕರಣ ಸಂದೇಶ ಸಾರಲು ಬೆಂಗಳೂರಿಗೆ ಆಗಮಿಸಿದ ಮೂವತ್ತೈೆೆದು ಮಂದಿ ಮಹಿಳೆಯರ ‘ಬೈಕಿಂಗ್ ಕ್ವೀನ್ಸ್’ ತಂಡಕ್ಕೆ ಸೋಮವಾರ ವಿವಿಧ ಸಂಘ-ಸಂಸ್ಥೆಗಳು ಅದ್ದೂರಿ ಸ್ವಾಗತ ಕೋರಿದವು.
‘ಸಶಕ್ತ ನಾರಿ, ಸಶಕ್ತ ಭಾರತ್’ ಎಂಬ ಘೋಷಣೆಯೊಂದಿಗೆ ಗುಜರಾತ್‌ನಿಂದ ಲಡಾಕ್‌ನ ಖರ್ದುಂಗ್-ಲಾವರೆಗಿನ 10 ಸಾವಿರ ಕಿ.ಮೀ ಅಭಿಯಾನವನ್ನು ಈ ತಂಡ ಕೈಗೊಂಡಿದ್ದು, ಹದಿನೈದು ರಾಜ್ಯಗಳಿಗೆ ಭೇಟಿ ಕೊಟ್ಟು ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಲಿದೆ.
ಐದು ಸಾವಿರ ಗ್ರಾಮಗಳನ್ನು ತಲುಪಿ ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲಿದೆ. ಈ ರ್ಯಾಲಿ ಮುಂದಿನ 36 ದಿನಗಳಲ್ಲಿ ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು, ಹೊಸದಿಲ್ಲಿ, ಚಂಡೀಘಡ ಮತ್ತು ರಾಜಸ್ಥಾನ ರಾಜ್ಯಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಲಾಗಿದೆ.
ಪ್ರತಿಯೊಂದು ರಾಜ್ಯದಲ್ಲೂ ಈ ತಂಡ ಸ್ಥಳೀಯ ಜನರನ್ನು ಭೇಟಿ ಮಾಡಿ ಮಹಿಳಾ ಸಬಲೀಕರಣದ ಬಗ್ಗೆ ಸಂದೇಶ ಸಾರಲಿದೆ. ಹಿಂದುಳಿದ ಮತ್ತು ಬಡ ಮಕ್ಕಳ ನೆರವಿಗಾಗಿ 9ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಕಿಟ್‌ಗಳನ್ನು ನೀಡಲಿದೆ. ಅಲ್ಲದೆ, ಮಹಿಳೆಯರ ನೈರ್ಮಲ್ಯಕ್ಕೆ ಸ್ಯಾನಿಟರಿ ಕಿಟ್‌ಗಳನ್ನು ವಿತರಿಸಲಿದೆ.
‘ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ನಮ್ಮ ತಂಡ ದೇಶಾದ್ಯಂತ ಅಭಿಯಾನ ಕೈಗೊಂಡಿದ್ದು, ಮಹಿಳೆಯರು ತಮ್ಮ ಪ್ರತಿಭೆಗಳನ್ನು ಹೊರಹಾಕಲು ಹಲವು ತೊಡಕುಗಳು ಎದುರಾಗುತ್ತಿವೆ. ಅಲ್ಲದೆ, ಕೀಳರಿಮೆಯೂ ಇದೆ. ಹೀಗಾಗಿ ಮಹಿಳೆಯರ ಸಬಲೀಕರಣದ ಮೂಲಕ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ’
-ಡಾ.ಸಾರಿಕಾ ಮೆಹ್ತಾ, ಆಲ್ ವುಮೆನ್ ರೈಡರ್ ಗ್ರೂಪ್







