ವ್ಯಾಪಂ: ಕಂಪ್ಯೂಟರ್ ಖರೀದಿ ದಾಖಲೆ ನಾಪತ್ತೆ

ಹೊಸದಿಲ್ಲಿ, ಜು.31: ವ್ಯಾಪಂ ಎಂದೇ ಜನಪ್ರಿಯವಾಗಿರುವ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ 2012-13ರಲ್ಲಿ 17.56 ಲಕ್ಷ ರೂ.ಮೊತ್ತದ ಕಂಪ್ಯೂಟರ್‌ಗಳನ್ನು ಖರೀದಿಸಿದ್ದು ಈ ಬಗ್ಗೆ ಯಾವುದೇ ದಾಖಲೆ ಲಭ್ಯವಿಲ್ಲ ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯಿಂದ ತಿಳಿದುಬಂದಿದೆ.
ಕಂಪ್ಯೂಟರ್ ಖರೀದಿಸಿದ ಬಗ್ಗೆ ಮೂಲ ದಾಖಲೆ, ಖರೀದಿಯ ನಿಯಮ ಅಥವಾ ಖರೀದಿಗೆ ಸಂಬಂಧಿಸಿದ ದಾಸ್ತಾನು ರಿಜಿಸ್ಟರ್‌ಗಳನ್ನು ಮಂಡಳಿ ಒದಗಿಸಿಲ್ಲ ಎಂದು ಲೆಕ್ಕಪತ್ರ ಪರಿಶೋಧಕರ ವರದಿಯಲ್ಲಿ ತಿಳಿಸಲಾಗಿದೆ.
ಕಂಪ್ಯೂಟರ್ ಖರೀದಿಯ ದಾಖಲೆ ಅತಿಮುಖ್ಯವಾಗಿದೆ. ಡಿಜಿಟಲ್ ದಾಖಲೆ ಮತ್ತು ಕಂಪ್ಯೂಟರ್‌ಗಳಿಂದ ಪಡೆಯುವ ಎಕ್ಸೆಲ್ ಹಾಳೆಗಳು ಅಪರಾಧ ಪ್ರಕರಣದ ಸಂದರ್ಭ ಪ್ರಮುಖ ಸಾಕ್ಷಿಗಳಾಗುತ್ತವೆ ಎಂದು ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಅಜಯ್ ದುಬೆ ಹೇಳಿದ್ದಾರೆ.
ಮಂಡಳಿ ನಡೆಸು ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಈ ಹಗರಣದಲ್ಲಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳು ಒಳಗೊಂಡಿದ್ದು ಹಲವಾರು ವರ್ಷಗಳಿಂದ ನಡೆಯುತ್ತಿತ್ತು. ಆದರೆ 2013ರಲ್ಲಿ ಬೆಳಕಿಗೆ ಬಂದಿದೆ. ಆ ಬಳಿಕ ಹಗರಣಕ್ಕೆ ಸಂಬಂಧಿಸಿದ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಮಂಡಳಿ 2012ರಲ್ಲಿ ಕಾನ್‌ಸ್ಟೇಬಲ್ ಆಯ್ಕೆಗೆ ನಡೆಸಿದ ನೇಮಕಾತಿ ಪರೀಕ್ಷೆ ಸಂದರ್ಭ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ 6.95 ಲಕ್ಷ ರೂಪಾಯಿ ಮೊತ್ತವನ್ನು ರಾಜ್ಯ ಸರಕಾರದ ಅನುಮತಿ ಪಡೆಯದೆ ಹಿಂದಿರುಗಿಸಿರುವ ಬಗ್ಗೆ ಲೆಕ್ಕಪತ್ರ ವರದಿಯಲ್ಲಿ ಪ್ರಶ್ನಿಸಲಾಗಿದೆ.
ವರದಿಯ ಪ್ರಕಾರ ಒಬಿಸಿ ಮತ್ತು ಮೀಸಲಾತಿ ರಹಿತ ವಿಭಾಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ಇದ್ದರೆ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 250 ರೂ.ಶುಲ್ಕ ಇದೆ. 471 ಒಬಿಸಿ, 689 ಮೀಸಲಾತಿ ರಹಿತ ಮತ್ತು 314 ಎಸ್‌ಸಿ ಮತ್ತು 148 ಎಸ್‌ಟಿ ಅಭ್ಯರ್ಥಿಗಳಿಂದ ಶುಲ್ಕ ಸಂಗ್ರಹಿಸಲಾಗಿದೆ. ಆದರೆ 2012-13ರಲ್ಲಿ ಎಷ್ಟು ಪರೀಕ್ಷೆ ನಡೆಸಲಾಗಿದೆ, ಪ್ರತಿಯೊಂದು ವಿಭಾಗದಿಂದ ಎಷ್ಟು ಅಭ್ಯರ್ಥಿಗಳು ಪಾಲ್ಗೊಂಡಿದ್ದರು ಹಾಗೂ 2012-13ರಲ್ಲಿ ಪರೀಕ್ಷೆ ಮೂಲಕ ಸಂಗ್ರಹಿಸಲಾದ ಆದಾಯ ಎಷ್ಟು ಎಂಬ ಮಾಹಿತಿ ಒದಗಿಸಲು ಮಂಡಳಿ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2009ರಲ್ಲಿ ನಕಲಿ ಅಭ್ಯರ್ಥಿಗಳಾಗಿ (ಮತ್ತೊಬ್ಬರ ಹೆಸರಲ್ಲಿ ಪರೀಕ್ಷೆ ಬರೆಯುವುದು) ಮೆಡಿಕಲ್ ಪ್ರವೇಶ ಪರೀಕ್ಷೆ ಬರೆದಿದ್ದ 20 ಮಂದಿಯನ್ನು 2013ರಲ್ಲಿ ಬಂಧಿಸುವುದರೊಂದಿಗೆ ‘ವ್ಯಾಪಂ’ ಹಗರಣ ಬೆಳಕಿಗೆ ಬಂದಿತ್ತು.







