ರಾಜ್ಯದ ಹಿತ ಕಾಯುವಲ್ಲಿ ಬಿಜೆಪಿ ಸಂಸದರು ವಿಫಲ: ದಿನೇಶ್ ಗುಂಡೂರಾವ್

ತುಮಕೂರು.ಜು.31:ಮಹಾದಾಯಿ, ಕಳಸ ಬಂಡೂರಿ ನಾಲಾ ವಿಚಾರ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಕುರಿತಂತೆ ರಾಜ್ಯದ ಜನರ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ಸಂಸದರು, ರಾಜ್ಯ ಸರಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಗೂಬೆ ಕೂರಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೋಭಾ ಕರಂದ್ಲಾಜ್, ಬಿ.ಎಸ್.ಯಡಿಯೂರಪ್ಪ, ಸಿ.ಟಿ.ರವಿ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವ ಶಾಸಕರ ಪಟ್ಟಿಯನ್ನು ಕಳೆದ ಎರಡು ವರ್ಷಗಳಿಂದ ಬಿಡುಗಡೆ ಮಾಡುತ್ತಲೇ ಇದ್ದಾರೆ. ಇದುವರೆಗೂ ಯಾರ ಹೆಸರು ಸಿಕ್ಕಿಲ್ಲ. ಆಧಾರವಿಲ್ಲದ ಹೇಳಿಕೆಗಳು, ಆರೋಪಗಳನ್ನು ಮಾಡುತ್ತಲೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಬಿಜೆಪಿ ಸಂಸದರು ಮಾತ್ರ, ಮಹಾದಾಯಿ, ಕಳಸ, ಬಂಡೂರಿ ನೀರಾವರಿ ಯೋಜನೆಗಳ ಬಗ್ಗೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಬಗ್ಗೆ ಪ್ರಧಾನಿ ಮುಂದೆ ತುಟ್ಟಿ ಬಿಚ್ಚಲು ತಯಾರಿಲ್ಲ. ಅವರಿಗೆ ಜನರ ಹಿತಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದೇ ಹೆಚ್ಚಾಗಿದೆ ಎಂದರು ತಿರುಗೇಟು ನೀಡಿದರು.
ಬಿಜೆಪಿ ನಾಯಕರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅವರು ನೀಡುತ್ತಿರುವ ಅಂಕಿ ಅಂಶಕ್ಕೂ, ವಾಸ್ತವ ಬೆಳವಣಿಗೆಗೂ ಸಾಕಷ್ಟು ವೆತ್ಯಾಸವಿದೆ. ಸಾರ್ವಜನಿಕರಿಗೆ ಸುಳ್ಳನೇ ಸತ್ಯವೆಂಬಂತೆ ನಂಬಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಶೇ90ರಷ್ಟು ಭರವಸೆಗಳನ್ನು ಈಡೇರಿಸಿದೆ. ಪ್ರಮುಖವಾಗಿ ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ನಿರಂತರ ಪ್ರಯತ್ನಿಸಿದೆ. ಹಾಗಾಗಿ ಪಕ್ಷ ಇನ್ನೂ ಜನಮನ್ನಣೆಯನ್ನು ಉಳಿಸಿಕೊಂಡಿದೆ. ಹಾಗಾಗಿ 2018ರ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಳ್ಳೆಯ ಅವಕಾಶವಿದೆ. ಮುಖಂಡರು ಕಾರ್ಯಕರ್ತರನ್ನು ಒಗ್ಗೂಡಿಸಿ, ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನುಡಿದರು.







