ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಣೆ

ತುಮಕೂರು.ಜು.31: ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಮಹಿರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ ಹಾಗೂ ದೇವರಾಜ ಅರಸು ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಪಡೆದ ಫಲಾನುಭವಿಗಳಿಗೆ ಪಂಪು ಮೋಟಾರು ವಿತರಿಸಲಾಯಿತು.
ಗಂಗಾಕಲ್ಯಾಣ ಫಲಾನುಭವಿಗಳಿಗೆ ಪಂಪ್ ಮೋಟಾರ್ ವಿತರಿಸಿ ಮಾತನಾಡಿದ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ, 2016-17ನೇ ಸಾಲಿನಲ್ಲಿ ತುಮಕೂರು ಗ್ರಾಮಾಂತರಕ್ಕೆ ಮೂರು ನಿಗಮಗಳಿಂದ ಒಟ್ಟು 106 ಗಂಗಾ ಕಲ್ಯಾಣ ಕೊಳವೆ ಬಾವಿಗಳನ್ನು ಕೊರೆಯುವ ಗುರಿಯಿದ್ದು ,ಇದುವರೆಗೂ 81 ಕೊಳವೆ ಬಾವಿಗಳನ್ನು ಕೊರೆಯ ಲಾಗಿದೆ. ಇನ್ನೂ 25 ಬೋರೆವಲ್ ಡ್ರಿಲ್ ಮಾಡುವುದು ಬಾಕಿಯಿದೆ. ಇದರಲ್ಲಿ ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 40, ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ 11 ಮತ್ತು ದೇವರಾಜು ಅರಸು ಅಭಿವೃದ್ದಿ ನಿಗಮದಿಂದ 20 ಜನ ಫಲಾನುಭವಿಗಳಿಗೆ ಇಂದು ಪಂಪು ಮೋಟಾರುಗಳನ್ನು ಇಂದು ನೀಡಲಾಗುತ್ತಿದೆ. ಉಳಿದಿರುವ ಕೊಳವೆ ಬಾವಿಗಳನ್ನು ಶೀಘ್ರವೇ ಕೊರೆದು ಫಲಾನುವಿಗಳಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲ ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಪಿ.ಮಣಿವಣ್ಣನ್ ಅವರಿಗೆ ಪತ್ರ ಬರೆದು ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯಲು, ಪಂಪು ಮೋಟಾರು ನೀಡಲು ಅಧಿಕಾರಿಗಳ ಕಮಿಷನ್ ದಂಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನೇರವಾಗಿ ಪ್ರತಿ ಯೂನಿಟ್‌ಗೆ ನಿಗಧಿಪಡಿಸಿದ ಹಣವನ್ನು ಫಲಾನುಭವಿಯ ಖಾತೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದೆ. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ. ನಮ್ಮ ಸರಕಾರ ಬಂದಾಗ ಕಂಡಿತ ಇದನ್ನು ಜಾರಿಗೆ ತರುತ್ತೇವೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದ ಎನ್.ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೂಳೂರು ಶಿವಕುಮಾರ್, ತಾ.ಪಂ.ಅಧ್ಯಕ್ಷ ಗಂಗಾಂಜನೇಯ, ತಾ.ಪಂ.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ,ಡಾ.ಬಿ,ಆರ್,ಅಂಬೇಡ್ಕರ್ ಅಭಿವೃದ್ದಿ ನಿಗಮ ಜಿಲ್ಲಾ ವ್ಯವಸ್ಥಾಪಕರಾದ ನಾಗೇಶ್, ಬಿ.ಸಿ.ಎಂ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಭಕ್ತ ಕುಚೇಲ, ವಾಲ್ಮೀಕಿ ನಿಗಮದ ವ್ಯವಸ್ಥಾಪಕರಾದ ಮಂಜುಳ ಮತ್ತಿತರರು ಉಪಸ್ಥಿತರಿದ್ದರು.







