ನಗರ ಕೈಗಾರಿಕ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಐದು ಕೋಟಿ ರೂ.ಅನುದಾನ: ಸಚಿವ ಜಾರ್ಜ್ ಭರವಸೆ

ಬೆಂಗಳೂರು, ಜು. 31: ಬಿಬಿಎಂಪಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಐದು ಕೋಟಿ ರೂ. ವಿಶೇಷ ಅನುದಾನ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಕಾಸಿಯಾ ಆಯೋಜಿಸಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದಲ್ಲಿ ಮೂಲ ಸೌಕರ್ಯ ಒದಗಿಸಲು ಸರಕಾರ ಎಂಟು ಸಾವಿರಕ್ಕೂ ಹೆಚ್ಚು ಅನುದಾನ ಮಿಸಲಿಟ್ಟಿದೆ. ಈ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಬೆಂಗಳೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೀಸಲಿಟ್ಟಿರುವ ಅನುದಾನದಲ್ಲಿ ಪೀಣ್ಯ, ರಾಜಾಜಿನಗರ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೈಗಾರಿಕ ಪ್ರದೇಶಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಐದು ಕೋಟಿ ರೂ. ನೀಡಲಾಗುವುದು ಎಂದರು.
ನಗರದ ವ್ಯಾಪ್ತಿಯಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗುವಂತ ಅನೇಕ ಯೋಜನೆಗಳನ್ನು ರಾಜ್ಯ ಸರಕಾರ ರೂಪಿಸಿದೆ. ಆದರೂ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಮುಂದಿನ ದಿನದಲ್ಲಿ ರಾಜಧಾನಿಯಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು, ಶಾಸಕರ ಹಾಗೂ ಬಿಬಿಎಂಪಿ ಮೇಯರ್ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ರೀತಿ ಸಣ್ಣ ಕೈಗಾರಿಕೆಗಳು ದೇಶದ ಬೆನ್ನೆಲುಬು. ಮಾರುಕಟ್ಟೆ ನಿಭಾಯಿಸುವಲ್ಲಿ ವಿಫಲವಾಗುತ್ತಿರುವುದರಿಂದ ಕೃಷಿಕರಿಗೆ ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೆ ಲಾಭ ಕೈ ತಪ್ಪುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಲು ರಾಜ್ಯದ ಸಣ್ಣ ಕೈಗಾರಿಕೆಗಳು ಇನ್ನಷ್ಟು ದಕ್ಷತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಕಾಸಿಯಾ ಅಧ್ಯಕ್ಷ ಆರ್. ಹನುಮಂತೇಗೌಡ ಮಾತನಾಡಿ, ಕೈಗಾರಿಕೋದ್ಯಮಿಗಳು ಕಟ್ಟುವ ತೆರಿಗೆಯ ಶೇ.40ರಷ್ಟನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಜಲಮಂಡಳಿ ವಿಧಿಸಿರುವ ಷರತ್ತುಗಳನ್ನು ಸರಳಗೊಳಿಸಬೇಕು ಹಾಗೂ ಬೆಂಗಳೂರು ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಲಭ್ಯ ಒದಗಿಸಲು ನೂರು ಕೋಟಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಸಂವಾದದಲ್ಲಿ ಶಾಸಕ ಎಸ್.ಟಿ ಸೋಮಶೇಖರ್, ಕಾಸಿಯಾ ಉಪಾಧ್ಯಕ್ಷ ಬಸವರಾಜ್ ಜವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







