ಬಂದಿಖಾನೆ ಡಿಜಿಪಿ ಸತ್ಯನಾರಾಯಣರಾವ್ ನಿವೃತ್ತಿ

ಬೆಂಗಳೂರು, ಜು.31: ಬಂದಿಖಾನೆ ಇಲಾಖೆಯ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಸೋಮವಾರ ಸೇವೆಯಿಂದ ನಿವೃತ್ತರಾಗಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ವಿಶೇಷ ಸವಲತ್ತು ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ ಎರಡ ವಾರಗಳ ಹಿಂದೆ ಕಡ್ಡಾಯ ರಜೆಯ ಮೇಲೆ ತೆರಳಿದ್ದ ಸತ್ಯನಾರಾಯಣರಾವ್, ಹೋಂಗಾರ್ಡ್ ಡಿಜಿಪಿಯಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ.
ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಹರಪನಹಳ್ಳಿಯಲ್ಲಿ ಎಎಸ್ಪಿಯಾಗಿ ವೃತ್ತಿ ಪ್ರಾರಂಭಿಸಿದ ಸತ್ಯನಾರಾಯಣರಾವ್, ಗುಲ್ಬರ್ಗ, ಬೀದರ್‌ನಲ್ಲಿ ಎಸ್ಪಿಯಾಗಿ, ಬೆಂಗಳೂರು ಕಮೀಷನರೇಟ್‌ನ ಕೇಂದ್ರ ಸ್ಥಾನ, ಗುಪ್ತದಳ, ಉತ್ತರ ಹಾಗೂ ದಕ್ಷಿಣ ವಿಭಾಗದ ಡಿಸಿಪಿ, ಸಿಬಿಐ ಎಸ್ಪಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಡಿಐಜಿ ಹುದ್ದೆಗೆ ಬಡ್ತಿ ಪಡೆದು ಪಶ್ಚಿಮ ವಲಯದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಐಜಿಯಾಗಿ ಬಡ್ತಿ ಪಡೆದು ಪೂರ್ವ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ಲೋಕಾಯುಕ್ತ ಎಡಿಜಿಪಿಯಾಗಿ ಸುಮಾರು ನಾಲ್ಕು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ನಂತರ ಅಗ್ನಿಶಾಮಕ ದಳಕ್ಕೆ ವರ್ಗಾವಣೆಗೊಂಡಿದ್ದ ಅವರು, ಡಿಜಿ ಹುದ್ದೆಗೆ ಬಡ್ತಿ ಪಡೆದು ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಕಾರಾಗೃಹದ ಡಿಜಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.





