20 ವರ್ಷಗಳಲ್ಲಿ ಭಾರತದಿಂದ 2,100 ವಿಮಾನಕ್ಕೆ ಕೋರಿಕೆ: ಬೋಯಿಂಗ್

ಹೊಸದಿಲ್ಲಿ, ಜು. 31: ಮುಂದಿನ 20 ವರ್ಷಗಳ ಒಳಗೆ ಭಾರತ 90 ಶತಕೋಟಿ ಪೌಂಡ್ ಮೊತ್ತದ 2100 ಹೊಸ ವಿಮಾನಗಳನ್ನು ಖರೀದಿಸುವ ನಿರೀಕ್ಷೆ ಇದೆ ಎಂದು ಬೋಯಿಂಗ್ ಕಂಪೆನಿ ಸೋಮವಾರ ಹೇಳಿದೆ.
ವೈಮಾನಿಕ ಮಾರುಕಟ್ಟೆಯಲ್ಲಿ ಭಾರತ ಜಗತ್ತಿನಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ದೇಶ. ಕಳೆದ 20 ವರ್ಷಗಳಿಂದ ಇಲ್ಲಿನ ದೇಶೀ ವಿಮಾನ ಪ್ರಯಾಣಿಕರ ಪ್ರಮಾಣ ಪ್ರತಿ ವರ್ಷ ಶೇ. 20ರಷ್ಟು ಏರಿಕೆಯಾಗುತ್ತಿದೆ.
ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಬಲಿಷ್ಠ ವಿನಿಮಯ ದರ, ಕಡಿಮೆ ಇಂಧನ ಬೆಲೆ ಹಾಗೂ ಅಧಿಕ ಭಾರ ಕೊಂಡೊಯ್ಯುವ ಸಾಮರ್ಥ್ಯ ಭಾರತವು ವೈಮಾನಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿರುವುದನ್ನು ಸೂಚಿಸುತ್ತದೆ ಎಂದು ಏಶಿಯಾ ಪೆಸಿಫಿಕ್ ಹಾಗೂ ಇಂಡಿಯಾ ಸೇಲ್ಸ್ ಎಟ್ ಬೋಯಿಂಗ್ ಕಮರ್ಷಿಯಲ್ ಏರ್‌ಪ್ಲೇನ್‌ನ ಹಿರಿಯ ಉಪಾಧ್ಯಕ್ಷ ದಿನೇಶ್ ಕೇಸ್ಕಾರ್ ಹೇಳಿದ್ದಾರೆ.
ಮುಂದಿನ 20 ವರ್ಷಗಳಲ್ಲಿ ಭಾರತ ಕೇಂದ್ರೀಕರಿಸಿ ದಕ್ಷಿಣ ಏಶ್ಯಾದಲ್ಲಿ ಪ್ರಯಾಣಿಕರ ಬೆಳವಣಿಗೆ ಶೇ. 8ರಷ್ಟು ಆಗಲಿದೆ. ಭಾರತದ ಪ್ರಾದೇಶಿಕ ಸಂಪರ್ಕ ಯೋಜನೆಗಳು ಘೋಷಣೆಯಾಗುವುದನ್ನು ಅವಲಂಭಿಸಿ ಮುಂದಿನ ವರ್ಷ ನೀಡುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದರು.





