ಶಾಲಾ ಕಟ್ಟಡವಿಲ್ಲದೆ, ಶೌಚಾಲಯದಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು!
ತನ್ನ ಕ್ಷೇತ್ರದಲ್ಲಿ ಇಂತಹ ಶಾಲೆಯಿದೆ ಎನ್ನುವ ಅರಿವೇ ಇಲ್ಲದ ಬಿಜೆಪಿ ಶಾಸಕ

ಭೋಪಾಲ್, ಜು,31: ಶಾಲಾ ಕಟ್ಟಡವಿಲ್ಲದೆ ಪ್ರಾಥಮಿಕ ತರಗತಿಯ ಮಕ್ಕಳು ಶೌಚಾಲಯದಲ್ಲಿ ಕೂತು ಪಾಠ ಕೇಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಪ್ರಮುಖ ಪಟ್ಟಣದ ಕೇವಲ 35 ಕಿ.ಮೀ. ದೂರದಲ್ಲಿರುವ ಮೊಖಾಂಪುರ ಗ್ರಾಮದ ಶಾಲೆಯ ದುಸ್ಥಿತಿಯಿದು.
ಆದರೆ ಆಶ್ಚರ್ಯವೆಂದರೆ ಸ್ಥಳೀಯ ಶಾಸಕರೊಬ್ಬರಿಗೆ ತಮ್ಮ ಕ್ಷೇತ್ರದಲ್ಲಿ ಇಂತಹ ಶಾಲೆಯಿರುವ ಬಗ್ಗೆ ಅರಿವೇ ಇಲ್ಲ. 2012ರಲ್ಲಿ ಆರಂಭವಾದ ಈ ಶಾಲೆ ಒಂದು ವರ್ಷದ ಕಾಲ ಬಾಡಿಗೆ ಕೋಣೆಯಲ್ಲಿ ತರಗತಿ ನಡೆಸಲಾಗಿದೆ. ಆದರೆ ಇದೀಗ ಅದೂ ಇಲ್ಲದೆ ಶೌಚಾಲಯದಲ್ಲಿ ತರಗತಿ ನಡೆಸುವಂತಾಗಿದೆ.
ಸುಮಾರು 34 ವಿದ್ಯಾರ್ಥಿಗಳು ಶೌಚಾಲಯದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಜೊತೆಗೆ ಈ ಶೌಚಾಲಯದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ.
ಶಾಲಾ ಕಟ್ಟಡ ಇಲ್ಲದಿರುವುದರಿಂದ ಶೌಚಾಲಯದಲ್ಲಿ ತರಗತಿ ನಡೆಸುವುದು ಅನಿವಾರ್ಯವಾಗಿದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಮರದ ಕೆಳಗೆ ತರಗತಿ ನಡೆಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಹೊರಗಡೆ ತರಗತಿ ನಡೆಸಲಾಗುತ್ತಿಲ್ಲ. ಆದ್ದರಿಂದ ಶೌಚಾಲಯದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕರಾದ ಕೈಲಾಶ್ ಚಂದ್ರ.
ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅವರು. ಆದರೆ ಬಿಜೆಪಿ ಶಾಸಕ ತನ್ನ ಕ್ಷೇತ್ರದಲ್ಲಿ ಇಂತಹ ಶಾಲೆಯೊಂದಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ನಿರಾಕರಿಸುತ್ತಾರೆ.







