ನಾಲೆಗೆ ನೀರು ಹರಿಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಮಂಡ್ಯ, ಜು.31: ಕಾವೇರಿ ಕೊಳ್ಳದ ಜಲಾಶಯಗಳಿಂದ ಕೂಡಲೇ ನಾಲೆಗೆ ನೀರುಹರಿಸಿ ಕೆರೆಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂಸದ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಮತ್ತು ಶಾಸಕರ ನೇತೃತ್ವದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಆವರಣದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದ ರೈತರ ಹಿತ ಕಡೆಗಣಿಸಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟುಕೊಂಡು ತಮಿಳುನಾಡಿಗೆ ನೀರುಹರಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ನೀರಾವರಿ ಸಚಿವರ ಎಂ.ಬಿ.ಪಾಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿಲ್ಲ. ಜನ ಜಾನುವಾರುಗಳು ನೀರಿಗೆ ಪರದಾಡುತ್ತಿದ್ದರೂ ಈಚೆಗೆ ಬಂದ ಅಲ್ಪಸ್ವಲ್ಪ ನೀರನ್ನೂ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಪುಟ್ಟರಾಜು, ಮರಿತಿಬ್ಬೇಗೌಡ ಹಾಗೂ ಜೆಡಿಎಸ್ ಶಾಸಕರು, ಇದೇ ರೀತಿ ಮುಂದುವರಿದರೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕೆಆರ್‌ಎಸ್ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೂ, ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಪ್ರತಿಭಟನೆಗಳಿಗೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಾಲೆಗಳಲ್ಲಿ ನೀರುಹರಿಸಿ ಕೆರೆಕಟ್ಟೆಗಳನ್ನು ಭರ್ತಿಮಾಡಿಸಬೇಕು ಎಂದು ತಾಕೀತು ಮಾಡಿದ ಅವರು, ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಶಾಸಕರಾದ ಡಿ.ಸಿ.ತಮ್ಮಣ್ಣ, ನಾರಾಯಣಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಎಲ್.ಆರ್.ಶಿವರಾಮೇಗೌಡ, ಪ್ರಭಾವತಿ ಜಯರಾಂ, ಜಿ.ಬಿ.ಶಿವಕುಮಾರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಜಿಪಂ ಸದಸ್ಯರಾದ ಅಶೋಕ್, ಚಂದಗಾಲು ಶಿವಣ್ಣ, ನಗರಸಭಾ ಸದಸ್ಯರಾದ ಸುನಿತಾರವೀಂದ್ರ, ಮಹೇಶ್‌ಕಷ್ಣ, ಅಂಬುಜಮ್ಮ, ಸಿದ್ದರಾಮೇಗೌಡ, ಶಂಕರಲಿಂಗೇಗೌಡ, ಡಿ.ರಮೇಶ್, ಬೇಲೂರು ಶಶಿಧರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







