ಇನ್ನು ಪ್ರತಿ ತಿಂಗಳು ಏರಿಕೆಯಾಗಲಿದೆ ಎಲ್‌ಪಿಜಿ ಬೆಲೆ
ಸಬ್ಸಿಡಿಸಹಿತ ಸಿಲಿಂಡರ್ ವ್ಯವಸ್ಥೆ ಶೀಘ್ರ ಅಂತ್ಯ

ಹೊಸದಿಲ್ಲಿ, ಜು.31: ಮುಂದಿನ ವರ್ಷದ ಮಾರ್ಚ್‌ನಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ವ್ಯವಸ್ಥೆಯನ್ನು ಅಂತ್ಯಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಇನ್ನು ಪ್ರತೀ ತಿಂಗಳು ಸಬ್ಸಿಡಿ ಸಹಿತ ಎಲ್‌ಪಿಜಿ ಬೆಲೆಯಲ್ಲಿ 4 ರೂ. ಏರಿಕೆ ಮಾಡಲಾಗುವುದು ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಈ ಹಿಂದೆ, 14.2 ಕಿ.ಗ್ರಾಂ. ತೂಕದ ಸಿಲಿಂಡರ್‌ಗೆ ಪ್ರತೀ ತಿಂಗಳು 2 ರೂ. ಹೆಚ್ಚಿಸುವಂತೆ (ವ್ಯಾಟ್ ಹೊರತುಪಡಿಸಿ) ಇಂಡಿಯನ್ ಆಯಿಲ್(ಐಒಸಿ), ಭಾರತ್ ಪೆಟ್ರೋಲಿಯಂ(ಬಿಪಿಸಿಎಲ್) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ(ಹೆಚ್‌ಪಿಸಿಎಲ್) ಸಂಸ್ಥೆಗಳಿಗೆ ಸರಕಾರ ಸೂಚಿಸಿತ್ತು. ಇದೀಗ ಈ ಏರಿಕೆ ಪ್ರಮಾಣವನ್ನು ದ್ವಿಗುಣಗೊಳಿಸಿ ಸಬ್ಸಿಡಿಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸಲು ಸೂಚಿಸಲಾಗಿದೆ ಎಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ. ವರ್ಷವೊಂದಕ್ಕೆ ಪ್ರತೀ ಮನೆಗೆ ಸಬ್ಸಿಡಿ ದರದಲ್ಲಿ 12 ಎಲ್‌ಪಿಜಿ ಸಿಲಿಂಡರ್ ಪಡೆಯಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಅಗತ್ಯವಿದ್ದವರು ಮಾರುಕಟ್ಟೆ ದರ ನೀಡಿ ಪಡೆಯಬಹುದಾಗಿದೆ.
14.2 ಕಿ.ಗ್ರಾಂ. ತೂಕದ ಸಿಲಿಂಡರ್‌ಗೆ ಪ್ರತೀ ತಿಂಗಳು 2 ರೂ. ಹೆಚ್ಚಿಸುವಂತೆ (ವ್ಯಾಟ್ ಹೊರತುಪಡಿಸಿ) 2016ರ ಜುಲೈ 1ರಂದು ಸಾರ್ವಜನಿಕ ಕ್ಷೇತ್ರದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದ್ದು ಆ ಬಳಿಕ ಇದುವರೆಗೆ 10 ಬಾರಿ ದರ ಏರಿಸಲಾಗಿದೆ. ಇದೀಗ 2017ರ ಮೇ 30ರಂದು ನೀಡಿದ ಆದೇಶದಲ್ಲಿ , ಸಬ್ಸಿಡಿ ಶೂನ್ಯಮಟ್ಟ ತಲುಪುವರೆಗೆ ಅಥವಾ ಮುಂದಿನ ವರ್ಷದ ಮಾರ್ಚ್‌ವರೆಗೆ (ಯಾವುದು ಮೊದಲೋ ಅದುವರೆಗೆ) ಪ್ರತೀ ತಿಂಗಳೂ 4 ರೂ. ದರ ಏರಿಸುವಂತೆ ಸರಕಾರ ತಿಳಿಸಿದೆ . ಈಗ ದಿಲ್ಲಿಯಲ್ಲಿ 14.2 ಕಿ.ಗ್ರಾಂ. ತೂಕದ ಸಬ್ಸಿಡಿಸಹಿತ ಸಿಲಿಂಡರ್‌ಗೆ 477.46 ರೂ. ದರವಿದೆ. ಕಳೆದ ವರ್ಷದ ಜೂನ್‌ನಲ್ಲಿ 419.18 ರೂ. ದರ ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 564 ರೂ. ಆಗಿದೆ. ಇತರ ಸಬ್ಸಿಡಿ ಸಹಿತ ಸಿಲಿಂಡರ್‌ಗಳ (5 ಕಿ.ಗ್ರಾಂ. ತೂಕ ಇತ್ಯಾದಿ) ಬೆಲೆಯನ್ನೂ ಸರಿ ಪ್ರಮಾಣದಲ್ಲಿ ಏರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ದೇಶದಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ ಹೊಂದಿದ ಒಟ್ಟು 18.11 ಕೋಟಿ ಗ್ರಾಹಕರಿದ್ದಾರೆ. ಇವರಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದ 2.5 ಕೋಟಿ ಬಡ ಮಹಿಳೆಯರೂ ಸೇರಿದ್ದಾರೆ. ಸಬ್ಸಿಡಿ ರಹಿತ ಎಲ್‌ಪಿಜಿ ಬಳಕೆದಾರರ ಸಂಖ್ಯೆ 2.66 ಕೋಟಿ ಎಂದು ಸರಕಾರದ ಮೂಲಗಳು ತಿಳಿಸಿವೆ.







