ಆ.1ರಿಂದ 'ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ' ರಾಷ್ಟ್ರೀಯ ಅಭಿಯಾನ

ಮಂಗಳೂರು, ಜು.31: ದೇಶಾದ್ಯಂತ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಆಗಸ್ಟ್ 1ರಿಂದ 25ರವರೆಗೆ 'ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ' ಎನ್ನುವ ಶೀರ್ಷಿಕೆಯಡಿ ರಾಷ್ಟ್ರೀಯ ಅಭಿಯಾನ ನಡೆಯಲಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.
ನಗರದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಸ್ವಯಂಘೋಷಿತ ಗೋರಕ್ಷಕರು ಗೋವುಗಳ ಹೆಸರಿನಲ್ಲಿ ಮುಸ್ಲಿಂ ಮತ್ತು ದಲಿತರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ 62 ಘಟನೆಗಳು ನಡೆದಿದ್ದು, 39 ಮಂದಿಯನ್ನು ಕೊಲ್ಲಲಾಗಿದೆ. ಇದರಲ್ಲಿ 31 ಮಂದಿ ಮುಸ್ಲಿಮರು ಮತ್ತು 8 ಮಂದಿ ದಲಿತರಾಗಿದ್ದಾರೆ.
ಈ ಅಭಿಯಾನದಲ್ಲಿ ಸ್ನೇಹಕೂಟ, ವಿಚಾರ ಸಂಕಿರಣ, ರ್ಯಾಲಿ, ಸಾರ್ವಜನಿಕ ಸಭೆ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಆನ್ ಲೈನ್ ನಲ್ಲಿ ಫಿರ್ಯಾದಿ ಸಲ್ಲಿಕೆ, ಪೋಸ್ಟರ್ ಅಭಿಯಾನ, ಕರಪತ್ರ ಹಂಚಿಕೆ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಹಾಗೂ ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ಎ.ಎಂ. ಉಪಸ್ಥಿತರಿದ್ದರು.





