ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಪಾದಯಾತ್ರೆ

ಪಾಂಡವಪುರ, ಜು.31: ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಸೋಮವಾರ ಬೇಬಿ ಬೆಟ್ಟದಿಂದ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಿತು.
‘ಬೇಬಿ ಬೆಟ್ಟ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್‌ನಾರಾಯಣಗೌಡ, ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಲು ಸರಕಾರ ಮುಂದಾಗದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಅಕ್ರಮ ಕಲ್ಲುಗಣಿಗಾರಿಕೆಯಿಂದ ಪರಿಸರ ಹಾಳಾಗುತ್ತಿದೆ. ದೂಳಿನಂದ ಜನಜಾನುವಾರಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜತೆಗೆ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಪ.ಮ.ರಮೇಶ, ಸಿ.ಎಂ.ರಾಜೇಂದ್ರ, ವೆಂಕಟರಮಣೇಗೌಡ, ಧನಂಜಯ, ಶ್ರೀರಂಗಪಟ್ಟಣ ಬಿಜೆಪಿ ಅಧ್ಯಕ್ಷ ಟಿ.ಶ್ರೀಧರ್, ಬೇಬಿ ಗ್ರಾಮದ ಮುಖಂಡ ಸಿದ್ದಲಿಂಗದೇವರು, ಹಾಗನಹಳ್ಳಿ ಗೋಪಾಲ್, ಶಿಂಡಭೋಗನಹಳ್ಳಿ ಕುಮಾರ್, ಡಿಂಕಾ ನಿಂಗಪ್ಪ, ಮಂಡಿಬೆಟ್ಟಹಳ್ಳಿ ಮಂಜುನಾಥ್, ಹಾಗನಹಳ್ಳಿ ನಂಜುಂಡಸ್ವಾಮಿ, ಡೈರಿ ರಾಮು, ಇತರರು ಪಾಲ್ಗೊಂಡಿದ್ದರು.







