ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿ: ಯುವ ಪದವೀಧರರಿಗೆ ವಿದ್ಯಾಶಂಕರ್ ಕರೆ
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ವ್ಯವಹಾರ ಆಡಳಿತ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು, ಜು. 31: ಮಾನವೀಯ ಮೌಲ್ಯಗಳನ್ನು ಮೈ ಗೂಡಿಸಿಕೊಂಡು ಅದನ್ನು ಇತರೆಡೆಗೆ ವಿಸ್ತರಿಸುವುದು ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುವಂತೆ ಎಂದು ಗ್ರಾಂಟ್ ಥೋರ್ನ್‌ಟನ್ ಇಂಡಿಯಾ ಎಲ್‌ಎಲ್‌ಪಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿದ್ಯಾಶಂಕರ್ ತಿಳಿಸಿದ್ದಾರೆ.
ಅವರು ಇಂದು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ವ್ಯವಹಾರ ಆಡಳಿತ ಕಾಲೇಜಿನ 8ನೆ ಸ್ನಾತಕೋತ್ತರ ಪದವಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಭಾರತ ಹಲವು ಮೌಲ್ಯಗಳನ್ನು ಹೊಂದಿರುವ ದೇಶ. ಉನ್ನತ ಮಟ್ಟದ ಮೌಲ್ಯಗಳು ಈ ದೇಶದ ಪಂಪರೆಯಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ಹೊರಬರುವ ಯುವ ಇಂಜಿನಿಯರು, ತಂತ್ರಜ್ಞರು ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸಬಹುದು, ಈ ಸಂದರ್ಭದಲ್ಲಿ ದೇಶದ ಬಗ್ಗೆ ತಾವು ಹೊಂದಿರುವ ದೇಶ ಪ್ರೇಮವನ್ನು ತೋರ್ಪಡಿಸಲು ಅವಕಾಶವಿದೆ. ತಮಗೆ ಕುಟುಂಬದಿಂದ, ಸಮಾಜದಿಂದ ,ಶಿಕ್ಷಣ ಸಂಸ್ಥೆಗಳಿಂದ ದೊರೆತಿರುವ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ಶೈಕ್ಷಣಿಕ ಮತ್ತು ತಾಂತ್ರಿಕ ಪರಿಣತಿಯನ್ನು ದೇಶದಲ್ಲಿ ಪಸರಿಸಬೇಕು. ಮೊದಲು ಈ ಮೌಲ್ಯಗಳ ಬಗ್ಗೆ ತಮ್ಮಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಸಹ್ಯಾದ್ರಿಯ ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾಶಂಕರ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಎಂಬಿಎ, ಎಂಸಿಎ ಮತ್ತು ಎಂಟೆಕ್ ವಿಭಾಗದ 260 ಯುವ ಸ್ನಾತಕೋತ್ತರ ಪದವಿಧರರನ್ನು ಪದವಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ.ಭೂಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಶ್ಮಿ ಕೋಡಿಕಲ್, ಡಾ.ವಿಶಾಲ್ ಸಮರ್ಥ, ಡಾ.ಜೆ.ವಿ. ಗೋರ್ಬಲ್, ಪ್ರೊ. ಸುಧೀರ್ ಶೆಟ್ಟಿ, ಡಾ. ಶಾಂತಾರಾಮ ರೈ, ಪ್ರೊ. ಮಹೇಶ್, ಡಾ. ಅಶ್ವತ್ ರಾವ್, ಡಾ. ಪ್ರೇಮಾನಂದ ಶೆಣೈ ಮೊದಲಾದವರು ಉಪಸ್ಥಿತರಿದ್ದರು.





