ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ಆರೋಪ; ಪತಿಯ ವಿರುದ್ಧವೇ ಪತ್ನಿ ದೂರು
ಬೆಂಗಳೂರು, ಜು.31: ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸಿದ್ದ ಎಂದು ಆರೋಪಿಸಿ ಪತಿಯ ವಿರುದ್ಧವೇ ಪತ್ನಿಯೊಬ್ಬಳು ಇಲ್ಲಿನ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿ ವಾಸವಾಗಿರುವ ದಂಪತಿ 2016ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು ಎನ್ನಲಾಗಿದ್ದು, ಮೊದಲ ರಾತ್ರಿಯಲ್ಲೇ ನನ್ನ ಮೇಲೆ ಪತಿ ವಿಕೃತಿ ಪ್ರದರ್ಶಿಸಿದ್ದ. ಬಳಿಕ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಸೇವನೆ ಮಾಡುವಂತೆ ಒತ್ತಡ ಹಾಕಿ ಬಳಿಕ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ನಂತರದ ದಿನಗಳಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ, ಮಾಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದೇ ಇದ್ದ ಸಂದರ್ಭದಲ್ಲಿ ಮೊದಲ ರಾತ್ರಿಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ, ಪತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.





