ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಗಂಗಾರಾಮ್ ಬಡೇರಿಯಾ
ಅಕ್ರಮ ಗಣಿಗಾರಿಕೆಗೆ ಪರವಾನಿಗೆ ನೀಡಿದ ಆರೋಪ

ಬೆಂಗಳೂರು, ಜು.31: ಅಕ್ರಮ ಗಣಿಗಾರಿಕೆಗೆ ಪರವಾನಿಗೆ ನೀಡಿದ ಆರೋಪ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಡೇರಿಯಾ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿ ಆ.8ಕ್ಕೆ ವಿಚಾರಣೆ ಮುಂದೂಡಿತು.
ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶರಾಗಿದ್ದ ಗಂಗಾರಾಮ್ ಬಡೇರಿಯಾ, ನಿಯಮಾವಳಿಗಳನ್ನು ಉಲ್ಲಂಘಿಸಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಹಾಗೂ ಹನುಮಾನ್ ಗಣಿ ಕಂಪೆನಿಗೆ ಗಣಿಗಾರಿಕೆ ನಡೆಸಲು ಪರವಾನಿಗೆ ನೀಡಿದ್ದರು ಎಂದು ಆರೋಪಿಸಿ ಎಸ್‌ಐಟಿ ಅಧಿಕಾರಿಗಳು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಹೀಗಾಗಿ, ಬಂಧನ ಭೀತಿ ಎದುರಿಸುತ್ತಿರುವ ಬಡೇರಿಯಾ ನಿರೀಕ್ಷಣಾ ಜಾಮೀನು ಅರ್ಜಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೊರೆಹೋಗಿದ್ದಾರೆ.
ಜಂತಕಲ್ ಗಣಿ ಕಂಪೆನಿಗೆ ನಿಯಮಬಾಹಿರವಾಗಿ ಪರವಾನಿಗೆ ನೀಡಿದ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ಮೇ 15ರಂದು ಬಂಧಿತರಾಗಿ ಕೆಲ ಕಾಲ ನ್ಯಾಯಾಂಗ ಬಂಧನಲ್ಲಿದ್ದರು. ನಂತರ ಜಾಮೀನು ಪಡೆದು ಬಿಡುಗಡೆಗೊಂಡಿರುವ ಬಡೇರಿಯಾಗೆ, ಇದೀಗ ಮತ್ತೆರಡು ಪ್ರಕರಣಗಳಲ್ಲಿ ಬಂಧನ ಭೀತಿ ಶುರುವಾಗಿದೆ.





