ಮೂರನೆ ಟೆಸ್ಟ್: ಮೊಯಿನ್ ಅಲಿ ಹ್ಯಾಟ್ರಿಕ್; ಇಂಗ್ಲೆಂಡ್‌ಗೆ ಭಾರೀ ಜಯ

ಲಂಡನ್, ಜು.31: ದಿ ಓವಲ್ ಕ್ರೀಡಾಂಗಣದ 100 ವರ್ಷದ ಇತಿಹಾಸದಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊಯಿನ್ ಅಲಿ ಅವರ ಅಮೋಘ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೂರನೆ ಟೆಸ್ಟ್ ಪಂದ್ಯವನ್ನು 239 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಆಫ್-ಸ್ಪಿನ್ನರ್ ಅಲಿ 75.5ನೆ ಓವರ್‌ನಲ್ಲಿ ಡಿಯನ್ ಎಲ್ಗರ್(136), 75.6ನೆ ಓವರ್‌ನಲ್ಲಿ ಕಾಗಿಸೊ ರಬಾಡ ವಿಕೆಟ್‌ನ್ನು ಕಬಳಿಸಿದರು. 77.1ನೆ ಓವರ್‌ನಲ್ಲಿ ಮೊರ್ನೆ ಮೊರ್ಕೆಲ್ ವಿಕೆಟ್‌ನ್ನು ಉರುಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಅಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಇಂಗ್ಲೆಂಡ್‌ನ 13ನೆ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. 79 ವರ್ಷಗಳ ಬಳಿಕ ಈ ಮೈಲುಗಲ್ಲು ತಲುಪಿದ ಇಂಗ್ಲೆಂಡ್‌ನ ಮೊದಲ ಸ್ಪಿನ್ನರ್ ಎನಿಸಿಕೊಂಡರು. ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಶುಕ್ರವಾರದಿಂದ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ.
ಮೂರನೆ ಟೆಸ್ಟ್ ಪಂದ್ಯದ ಗೆಲುವಿಗೆ 492 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡ ಭೋಜನವಿರಾಮದ ಬಳಿಕ 252 ರನ್‌ಗೆ ಆಲೌಟಾಯಿತು. ಆಲ್‌ರೌಂಡರ್ ಅಲಿ 45 ರನ್‌ಗೆ 4 ವಿಕೆಟ್ ಉರುಳಿಸಿದರು.
ಇಂಗ್ಲೆಂಡ್ ಲಾರ್ಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನ್ನು 211 ರನ್‌ಗಳಿಂದ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕ ಎರಡನೆ ಪಂದ್ಯವನ್ನು 340 ರನ್‌ಗಳ ಅಂತರದಿಂದ ಜಯ ಸಾಧಿಸಿ 1-1 ರಿಂದ ಸಮಬಲ ಸಾಧಿಸಿತ್ತು. ಇದೀಗ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. 5ನೆ ದಿನವಾದ ಸೋಮವಾರ 4 ವಿಕೆಟ್ ನಷ್ಟಕ್ಕೆ 117ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಕ್ಕೆ ಎಡಗೈ ಆರಂಭಿಕ ಆಟಗಾರ ಎಲ್ಗರ್ ಹಾಗೂ ಬವುಮಾ 5ನೆ ವಿಕೆಟ್‌ಗೆ 108 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ರೊಲ್ಯಾಂಡ್-ಜೋನ್ಸ್ ಬೇರ್ಪಡಿಸಿದರು. ಎಲ್ಗರ್ 149 ಎಸೆತಗಳಲ್ಲಿ 8ನೆ ಶತಕ ಪೂರೈಸಿ ದಕ್ಷಿಣ ಆಫ್ರಿಕದ ಪರ ಏಕಾಂಗಿ ಹೋರಾಟ ನೀಡಿದರು. ಐದೂವರೆ ಗಂಟೆಕಾಲ ಕ್ರೀಸ್‌ನಲ್ಲಿದ್ದ ಎಲ್ಗರ್‌ಗೆ ಮೊಯಿನ್ ಅಲಿ ಪೆವಿಲಿಯನ್ ಹಾದಿ ತೋರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 112 ರನ್ ಗಳಿಸಿದ್ದ, ರವಿವಾರ 2ನೆ ಇನಿಂಗ್ಸ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ದಕ್ಷಿಣ ಆಫ್ರಿಕದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ಎಫ್ ಡುಪ್ಲೆಸಿಸ್‌ರನ್ನು ಪೆವಿಲಿಯನ್‌ಗೆ ಅಟ್ಟಿದ್ದ ಬೆನ್ ಸ್ಟೋಕ್ಸ್ ‘ಪಂದ್ಯಶ್ರೇಷ್ಠ’ಗೌರವಕ್ಕೆ ಪಾತ್ರರಾದರು.







