ಹೋಂರೂಲ್ ಲೀಗ್ ಆರಂಭ
ಈ ದಿನ

1916ರ ಆ.1ರಂದು ಬ್ರಿಟಿಷ್ ಥಿಯೋಸೊಫಿಸ್ಟ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಅನಿ ಬೆಸೆಂಟ್ ಹೋಂ ರೂಲ್ ಲೀಗ್ ಚಳವಳಿಯನ್ನು ಭಾರತದಲ್ಲಿ ಆರಂಭಿಸಿದರು. ಸ್ವತಂತ್ರ ಆಡಳಿತದ ಪರಿಕಲ್ಪನೆಯನ್ನು ಹೊಂದಿದ್ದ ಈ ಚಳವಳಿಯು ಭಾರತಕ್ಕೆ ಬ್ರಿಟಿಷರಿಂದ ಡೊಮಿನಿಯನ್ ರಾಜ್ಯದ ಮಾನ್ಯತೆ ಕೊಡಿಸಲು ಉತ್ಸುಕವಾಗಿತ್ತು. ಈ ಚಳವಳಿಯು ಪ್ರಮುಖವಾಗಿ ಉತ್ತರಪ್ರದೇಶದ ಕಾಯಸ್ಥ, ತಮಿಳುನಾಡು ಹಾಗೂ ಕಾಶ್ಮೀರಿ ಬ್ರಾಹ್ಮಣ ಸಮುದಾಯಗಳಿಂದ ಅಷ್ಟೇ ಅಲ್ಲದೆ ಕೆಲವು ಗುಜರಾತ್ ಕೈಗಾರಿಕೋದ್ಯಮಿಗಳಿಂದ ಅಪಾರ ಬೆಂಬಲ ಪಡೆದಿತ್ತು. ಆದರೆ 1920ರ ವೇಳೆ ಮಹಾತ್ಮಾ ಗಾಂಧೀಜಿ ಸ್ವಾತಂತ್ರ ಹೋರಾಟಕ್ಕೆ ಧುಮುಕಿದ ನಂತರ ಹೋಂ ರೂಲ್ ಲೀಗ್ ಕಾಂಗ್ರೆಸ್‌ನಲ್ಲಿ ವಿಲೀನವಾಯಿತು.
* 1953ರ ಈ ದಿನ ಭಾರತದ ಎಲ್ಲ ವಿಮಾನ ಕಂಪೆನಿಗಳು ಸಂಸತ್ತಿನ ವಾಯುಯಾನ ನಿಗಮ ಕಾಯ್ದೆಯನ್ವಯ ರಾಷ್ಟ್ರೀಕರಣಗೊಂಡವು.
* 1975ರಲ್ಲಿ ದರ್ಬಾ ಬ್ಯಾನರ್ಜಿ ಎಂಬವರು ವ್ಯಾವಹಾರಿಕ ಪ್ರಯಾಣಿಕ ವಿಮಾನವನ್ನು ಚಲಾಯಿಸಿದ ಪ್ರಪಂಚದ ಪ್ರಪ್ರಥಮ ವೃತ್ತಿಪರ ಮಹಿಳಾ ಪೈಲಟ್ ಎನಿಸಿಕೊಂಡರು.
* 1774ರ ಈ ದಿನವೇ ಇಂಗ್ಲೆಂಡ್ ರಸಾಯನ ಶಾಸ್ತ್ರಜ್ಞ ಜೋಸೆಫ್ ಪ್ರೀಸ್ಟ್‌ಲಿ ಜೀವವಾಯು ಎಂದು ಕರೆಯಲ್ಪಡುವ ಆಮ್ಲಜನಕವನ್ನು ಕಂಡುಹಿಡಿದನು.
* 1834ರಲ್ಲಿ ಬ್ರಿಟನ್‌ನಲ್ಲಿ ಗುಲಾಮಿ ಪದ್ಧತಿ ರದ್ದು ಕಾಯ್ದೆ ಅನ್ವಯ, ಗುಲಾಮಿ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲಾಯಿತು.
* 1936ರ ಈ ದಿನ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬರ್ಲಿನ್‌ನಲ್ಲಿ 11ನೆ ಒಲಿಂಪಿಕ್ಸ್ ಕ್ರೀಡೆಗಳಿಗೆ ಚಾಲನೆ ಕೊಟ್ಟನು.
*1899ರ ಈ ದಿನ ಕಮಲಾ ನೆಹರೂ ಅವರ ಜನ್ಮದಿನವಾಗಿದೆ.
*1920ರಲ್ಲಿ ಬಾಲಗಂಗಾಧರ್ ತಿಲಕರು ನಿಧನರಾದರು.
*1999ರ ಈ ದಿನ ಬಂಗಾಳದ ಇಂಗ್ಲಿಷ್ ಸಾಹಿತಿ ನೀರದ್ ಚೌಧುರಿ ನಿಧನ ಹೊಂದಿದರು.





