ಸೀನನ್ನು ನಿಯಂತ್ರಿಸಕೂಡದು....ಏಕೆ ಗೊತ್ತೇ?
ಈ ಜಗತ್ತಿನಲ್ಲಿ ಸೀನದವರು ಯಾರೂ ಇಲ್ಲ. ನಿಜಕ್ಕೂ ಅದು ಒಂದು ಅಚ್ಚರಿಯೇ ಸೈ. ಅದನ್ನು ನಿಯಂತ್ರಿಸುವುದು ಸುಲಭವಲ್ಲ, ನಿಲ್ಲಿಸುವುದೂ ಸಾಧ್ಯವಿಲ್ಲ. ಗಾಳಿ ಮತ್ತು ನೀರಿನ ಹನಿಗಳು ಬಲಪೂರ್ವಕವಾಗಿ ಬಾಯಿಯಿಂದ ಹೊರತಳ್ಳಲ್ಪಡುವುದನ್ನು ನಾವು ಸೀನು ಎಂದು ಕರೆಯುತ್ತೇವೆ. ಕೆಲವೊಮ್ಮೆ ಸೀನಿನಲ್ಲಿರುವ ತುಂತುರು ನೀರು 30 ಅಡಿಗಳಷ್ಟು ದೂರಕ್ಕೆ ಸಾಗುವುದೂ ಉಂಟು. ಹೀಗಾಗಿ ಸೋಂಕಿಗೊಳಗಾಗಿರುವ ವ್ಯಕ್ತಿಯೋರ್ವ ಸೀನಿದಾಗ ಸೋಂಕು ಇನ್ನೊಬ್ಬರಿಗೂ ಹರಡಬಹುದು. ಸೀನಿದಾಗ ನೀರಿನ ಹನಿಗಳು ಗಂಟೆಗೆ 20-40 ಮೀಟರ್ಗಳಷ್ಟು ವೇಗದಲ್ಲಿ ಹೊರಗೆ ತಳ್ಳಲ್ಪಡುತ್ತವೆ ಎನ್ನುವುದು ಗೊತ್ತೇ? ನೀವು ಜನರ ಮಧ್ಯೆ ಇದ್ದಾಗ ನಿಮಗೆ ಸೀನು ಬಂದರೆ ಅದನ್ನು ತಡೆಯಲು ಪ್ರಯತ್ನಿಸುತ್ತೀರಿ. ಆದರೆ ಹಾಗೆ ಮಾಡುವುದು ಹಾನಿಕಾರಕ ವಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸೀನು ಅಕ್ಕಪಕ್ಕದಲ್ಲಿರುವವರಿಗೂ ಹಾನಿಕಾರಕವಾಗಿದೆ.
ಕೆಲವೊಮ್ಮೆ ಸೀನು ಬಂದಾಗ ಅದನ್ನು ಬಲವಂತದಿಂದ ನಿಯಂತ್ರಿಸಿದರೆ ಕಿವಿಯ ತಮಟೆಗೆ ಹಾನಿಯಾಗಬಹುದು. ಅಲ್ಲದೆ ಕಣ್ಣಿನಲ್ಲಿಯ ಯಾವುದಾದರೂ ನರ ಉಬ್ಬಲೂ ಕಾರಣವಾಗಬಹುದು. ಸೀನಿನ ಒತ್ತಡವು ತಲೆಬುರುಡೆ ಅಥವಾ ಮೂಗಿನ ಹೊಳ್ಳೆಗಳಿಗೂ ಹರಡಬಹುದಾದ್ದರಿಂದ ಅದು ಅಪಾಯಕಾರಿಯೂ ಹೌದು. ಸಮಾಧಾನದ ವಿಷಯ ವೆಂದರೆ ಸೀನಿನಿಂದ ಉಂಟಾಗುವ ಹಾನಿಯನ್ನು ನಮ್ಮ ಶರೀರವು ಸ್ವಯಂ ಸರಿಪಡಿಸಿ ಕೊಳ್ಳುತ್ತದೆ. ಆದರೂ ತೀವ್ರ ಸೀನು ಬಂದಾಗ ಅದನ್ನು ನಿಲ್ಲಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ಸಂಶೋಧಕರು.
ಹಾಗಿದ್ದರೆ ಜನರ ಮಧ್ಯೆ ಇದ್ದಾಗ ಸೀನು ಬಂದರೆ ಏನು ಮಾಡಬೇಕು? ಕರವಸ್ತ್ರದಿಂದ ಬಾಯಿಯನ್ನು ಮುಚ್ಚಿಕೊಂಡು ಸೀನುವುದು ಒಳ್ಳೆಯದು. ಇದರಿಂದಾಗಿ ಸೋಂಕು ಇತರರಿಗೆ ಹರಡುವುದು ತಪ್ಪುತ್ತದೆ ಮತ್ತು ಇದೇ ವೇಳೆ ಶರೀರಕ್ಕೆ ನಿರಾಳತೆಯ ಅನುಭವವಾಗುತ್ತದೆ.
ಇನ್ಫ್ಲುಯೆಂಜಾದಂತಹ ಕಾಯಿಲೆಗಳು ಸೀನಿನ ಮೂಲಕ ಸುಭವಾಗಿ ಹರಡುತ್ತವೆ. ನಿಮ್ಮ ಸಮೀಪದ ವ್ಯಕ್ತಿ ಸೀನುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳುವುದರಿಂದ ಸಂಭಾವ್ಯ ಸೋಂಕಿನಿಂದ ಪಾರಾಗಬಹುದು.
ನಿಮ್ಮ ಬಳಿ ಕೆಲವು ಟಿಶ್ಯೂ ಪೇಪರ್ ಇದ್ದರೆ ಮತ್ತೂ ಒಳ್ಳೆಯದು. ನಿಮಗೇ ಸೀನು ಬಂದರೆ ಅಥವಾ ಸಮೀಪದಲ್ಲಿಯ ಬೇರೆ ಯಾರಾದರೂ ಸೀನಿದರೆ ಉಪಯೋಗಿಸಬಹುದಾಗಿದೆ.