ದ.ಕ.ಜಿಲ್ಲೆಯಲ್ಲಿ ‘ಹೆಚ್1 ಎನ್1’ನ 200 ಪ್ರಕರಣಗಳು ಪತ್ತೆ
ಮಂಗಳೂರು, ಆ.1: ದ.ಕ. ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ‘ಹೆಚ್1 ಎನ್1’ನ 200 ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ ಇಬ್ಬರು ಇತ್ತೀಚೆಗೆ ಮೃತಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣರಾವ್ ತಿಳಿಸಿದ್ದಾರೆ.
ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾದ ಕಾರಣ ಜನರು ಮುನ್ನೆಚ್ಚರಿಕೆ ವಹಿಸಬೇಕಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ 1 ಎನ್1 ವ್ಯಾಪಕವಾಗಿ ಕಾಡುತ್ತಿದೆ. ಇದಕ್ಕೆ ತಡೆ ಹಾಕಲು ಇಲಾಖೆ ಸನ್ನದ್ಧವಾಗಿದೆ ಎಂದರು.
ಹಳ್ಳಿಗಾಡಿನಲ್ಲಿ ಖಾಸಗಿ ಕ್ಲಿನಿಕ್ ಅಥವಾ ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ಔಷಧ ನೀಡಿದ ಹೊರತಾಗಿಯೂ ಜ್ವರ, ಶೀತ, ಕೆಮ್ಮು ಇತ್ಯಾದಿ ಗುಣಮುಖವಾಗದಿದ್ದಲ್ಲಿ ತಕ್ಷಣ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಇಲ್ಲದಿದ್ದಲ್ಲಿ ಸರಕಾರಿ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಡಾ.ರಾಮಕೃಷ್ಣ ರಾವ್ ಹೇಳಿದರು.
ಮೈಕೈ ನೋವು, ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಚಳಿ, ಸುಸ್ತು, ಅತಿಸಾರ ಭೇದಿ, ವಾಂತಿ ಇತ್ಯಾದಿ ಹೆಚ್1 ಎನ್1ನ ಲಕ್ಷಣವಾಗಿದೆ. ಇದನ್ನು ತಡೆಗಟ್ಟಲು ಸೂಕ್ತ ಮುಂಜಾಗರೂಕತಾ ಕ್ರಮ ಜರಗಿಸಬೇಕು ಎಂದರು.
59 ಡೆಂಗ್ ಪ್ರಕರಣ: ಜಿಲ್ಲೆಯಲ್ಲಿ ಈವರೆಗೆ 59 ಡೆಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ಅದರಲ್ಲಿ 6 ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದದ್ದಾಗಿದೆ. ಮಲೇರಿಯಾ ರೋಗಗಳ ನಿಯಂತ್ರಣಕ್ಕೂ ಇಲಾಖೆ ಸಾಕಷ್ಟು ಕ್ರಮ ಜರಗಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಲಾಖಾಧಿಕಾರಿಗಳಾದ ಡಾ. ಅರುಣ್, ಡಾ. ರಾಜೇಶ್, ಡಾ. ಅಶೋಕ್ ಉಪಸ್ಥಿತರಿದ್ದರು.







