‘ಪ್ರತ್ಯೇಕ ಧರ್ಮ’ ಅತ್ಯಂತ ಸೂಕ್ಷ್ಮ ವಿಷಯ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.1: ಪ್ರತ್ಯೇಕ ವೀರಶೈವ-ಲಿಂಗಾಯತ ಧರ್ಮದ ವಿಚಾರವು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಯಾವುದೆ ಚರ್ಚೆಗಳು ನಡೆದಿಲ್ಲ. ಅಗತ್ಯವಿದ್ದಲ್ಲಿ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಕೆಲವು ಸಚಿವರು ಕೈಗೊಳ್ಳಲು ಉದ್ದೇಶಿಸಿರುವ ಪ್ರವಾಸದ ವಿಷಯವು ಚರ್ಚೆಯಾಗಿಲ್ಲ. ಇದು ಸರಕಾರದ ತೀರ್ಮಾನವೇ ಹೊರತು, ಪಕ್ಷದ ತೀರ್ಮಾನವಲ್ಲ ಎಂದರು.
ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗುವುದು ಸೂಕ್ಷ್ಮ ವಿಷಯ. ಕೆಲವು ಮಠಾಧೀಶರು ಪ್ರತ್ಯೇಕ ಧರ್ಮ ಬೇಕು ಎನ್ನುತ್ತಿದ್ದಾರೆ, ಕೆಲವರು ಬೇಡ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಅವರಲ್ಲೆ ಗೊಂದಲಗಳಿವೆ ಎಂದು ಪರಮೇಶ್ವರ್ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟ ವಿಚಾರ. ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷದ ಸಂಘಟನೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುವುದು ಹಾಗೂ ಚುನಾವಣಾ ತಯಾರಿಗೆ ಹೆಚ್ಚಿನ ಒತ್ತು ನೀಡಲು ಕೆಪಿಸಿಸಿಯಿಂದ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಈ ಹಿಂದೆ ಸೂಚನೆ ನೀಡಿದಂತೆ ಎಲ್ಲ ಸಚಿವರು ಕಾಲಕಾಲಕ್ಕೆ ಕೆಪಿಸಿಸಿ ಕಚೇರಿಗೆ ಬಂದು ಕಾರ್ಯಕರ್ತರ ಅಹವಾಲುಗಳನ್ನು ಆಲಿಸುತ್ತಿದ್ದರು. ಈಗ ಸಚಿವರು ಕೆಪಿಸಿಸಿ ಕಚೇರಿಗೆ ಬರಲೇಬೇಕು ಅಂತಾ ಯಾವ ಸೂಚನೆಯನ್ನು ನೀಡಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಗುಜರಾತ್‌ನ ಕಾಂಗ್ರೆಸ್ ಶಾಸಕರು ರಾಜ್ಯ ಪ್ರವಾಸ ಕೈಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಗ್ಗೆ ವಿದೇಶ ಪ್ರವಾಸದಿಂದ ಬಂದಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ರಾಜ್ಯಸಭಾ ಚುನಾವಣೆಯಲ್ಲಿ ಗುಜರಾತ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದರು. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ-ಗತಿಗಳು ಉತ್ತಮಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದಕ್ಕಾಗಿ ಬಿಜೆಪಿ ನಾಯಕರಲ್ಲಿ ಭಯದ ವಾತಾವರಣ ಆವರಿಸಿಕೊಂಡಿದೆ ಎಂದು ಪರಮೇಶ್ವರ್ ಹೇಳಿದರು.
ಆ.12ಕ್ಕೆ ರಾಯಚೂರು ಸಮಾವೇಶ: ರಾಯಚೂರಿನಲ್ಲಿ ಆಗಸ್ಟ್ 4ರಂದು ನಡೆಯಬೇಕಿದ್ದ ಕಾಂಗ್ರೆಸ್ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಇದೇ ತಿಂಗಳ 12ರಂದು ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ವಿಧಿಯನ್ನು ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ಯುಪಿಎ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡು, ಅನುಷ್ಠಾನ ಮಾಡಿತ್ತು. ಅಲ್ಲದೆ, ರಾಜ್ಯ ಸರಕಾರವು 2013ರಲ್ಲಿ ಕೊಟ್ಟ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ವಿಶೇಷ ಸ್ಥಾನಮಾನ ನೀಡಿದ ಪರಿಣಾಮ ಆ ಭಾಗದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದು ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಸಮಾವೇಶಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ವಿಭಾಗ, ಮೈಸೂರು ವಿಭಾಗ, ಬೆಂಗಳೂರು ವಿಭಾಗದಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಈ ಸಮಾವೇಶಗಳಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ಹರಿಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಆಗಸ್ಟ್ 15ರ ಒಳಗಡೆ ಬೂತ್ ಏಜೆಂಟ್ ಪಟ್ಟಿ ಸಿದ್ಧಪಡಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ರಾಜ್ಯ ಸರಕಾರದ ಸಾಧನೆಗಳನ್ನು ಹಾಗೂ ಕೇಂದ್ರದ ಯುಪಿಎ 1 ಮತ್ತು ಯುಪಿಎ 2ರ ಸಾಧನೆಗಳನ್ನು ಮನೆ-ಮನೆಗೆ ತೆರಳಿ ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಪರಮೇಶ್ವರ್ ಹೇಳಿದರು.
ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯಗಳನ್ನು ಪ್ರತಿ ಮತದಾರರಿಗೆ ತಿಳಿಸಿ 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಜನಾದೇಶ ಪಡೆಯಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.







