ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಬೆಂಬಲ

ಬೆಂಗಳೂರು, ಆ.1: ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದು ನಾಗರಿಕ ಹಕ್ಕಾಗಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ನ್ಯಾಯಕ್ಕಾಗಿ ನಾವು ಸಂಘಟನೆ ತಿಳಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಮರುಳಸಿದ್ದಪ್ಪ, ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂಬುದು ಇಂದಿನ ಚರ್ಚೆಯಲ್ಲ. ಬ್ರಿಟೀಷರ ಕಾಲದಿಂದಲೂ ಪ್ರತ್ಯೇಕ ಧರ್ಮ ಮಾಡಬೇಕು ಎಂಬ ಅಲೆಯಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಅದನ್ನು ಮರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಹಿಂದೂ ಧರ್ಮದಲ್ಲಿ ಹಿಂದುತ್ವದ ಹೇರಿಕೆ ಹಾಗೂ ಕೋಮುವಾದ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತರು ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಾಗುವುದಕ್ಕೆ ಸಾಧ್ಯನೇ ಇಲ್ಲ. ಈ ಧರ್ಮದ ರಚನೆಯಲ್ಲಿ ಲಿಂಗಾಯತರ ನಂಬಿಕೆ, ಆಚರಣೆ, ಸಂಪ್ರದಾಯಗಳು ಸೇರಿದಂತೆ ಎಲ್ಲವೂ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಹಿಂದೂ ಧರ್ಮಕ್ಕೆ ವರ್ಣಾಶ್ರಮ ಪದ್ಧತಿ ಮೂಲವಾದರೆ, ಲಿಂಗಾಯತರಿಗೆ ವಚನಗಳು ಮೂಲವಾಗಿದೆ ಎಂದು ಅವರು ಹೇಳಿದರು.
ವಚನಕಾರರು ವರ್ಣಾಶ್ರಮ ಮತ್ತು ಜಾತಿ ಪದ್ಧತಿ, ದೇವಾಲಯ ಸಂಸ್ಕೃತಿ, ಕರ್ಮ ಸಿದ್ಧಾಂತ, ಪುನರ್ ಜನ್ಮ, ವೇದ, ಶಾಸ್ತ್ರ, ಪುರಾಣ, ವೌಢ್ಯಾಚರಣೆ, ಪ್ರಾಣಿ ಬಲಿ, ನರಬಲಿ ಎಲ್ಲವನ್ನೂ ನಿರಕಾರಿಸಿದ್ದರು. ಆದರೆ, ಹಿಂದೂ ಧರ್ಮದ ವೈದಿಕತೆ ಇವೆಲ್ಲವನ್ನೂ ಒಪ್ಪಿಕೊಂಡಿದೆ. ಅಲ್ಲದೆ, ಲಿಂಗಾಯತರು ಹುಟ್ಟು, ಸಾವು ಮತ್ತು ವಿವಾಹಗಳ ಸಂಪ್ರದಾಯಗಳಲ್ಲಿಯೂ ಭಿನ್ನವಾಗಿದ್ದಾರೆ. ಈ ನಿಟ್ಟಿನಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಪುಷ್ಟೀಕರಿಸುತ್ತವೆ ಎಂದು ಅವರು ವಿವರಿಸಿದರು.
ಹಿರಿಯ ಸಾಹಿತಿ ಪ್ರೊ.ಚಂಪಾ ಮಾತನಾಡಿ, ಜಡಗಟ್ಟಿದ ಪರಿಸ್ಥಿತಿಯಲ್ಲಿ ಪ್ರತ್ಯೇಕತೆಯ ಪ್ರಯತ್ನ ಮಾಡುತ್ತಿರುವವರಿಗೆ ಪ್ರಗತಿಪರರು, ಮಾನವೀಯ ವೌಲ್ಯಗಳುಳ್ಳವರು ಇದರ ಪರವಾಗಿ ನಿಲ್ಲಬೇಕು. ಧರ್ಮದ ಬಗ್ಗೆ ಮಾತನಾಡುವುದರ ಬದಲಿಗೆ ವೈಯಕ್ತಿಕವಾಗಿ ಟೀಕೆ, ಕೆಟ್ಟದಾದ ಭಾಷೆ ಬಳಕೆ ಮಾಡಿ ಒಬ್ಬರ ಚಾರಿತ್ರವಧೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ವಾದ, ಪ್ರತಿವಾದ ಹಾಗೂ ಸಂವಾದದ ಮೂಲಕ ಸರಿ-ತಪ್ಪುಗಳನ್ನು ಹುಡುಕಬೇಕು. ಅನಗತ್ಯವಾದ ಹೇಳಿಕೆಗಳನ್ನು ನೀಡುವ ಮೂಲಕ ಸಮುದಾಯದ ದಿಕ್ಕು ತಪ್ಪಿಸಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದ ಅವರು, ಇದು ಶತಮಾನಗಳ ಜಗಳವಾಗಿದ್ದು, ಹಿಂದೂ ಧರ್ಮ ಬಲಪಂಥದಂತೆ, ಲಿಂಗಾಯತ ಧರ್ಮ ಎಡಪಂಥದಂತೆ, ವೀರಶೈವರು ಮಧ್ಯಂತರ ವರ್ಗದಂತೆ ನಿರಂತರವಾದ ತಿಕ್ಕಾಟ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಎಲ್ಲರ ಅಭಿಪ್ರಾಯ ಪಡೆಯುವ ಸಲುವಾಗಿ ಆ.8 ರಂದು ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಮಠಾಧೀಶರ, ವಿವಿಧ ಧರ್ಮ ಗುರುಗಳು, ಪ್ರಗತಿಪರರು, ಸಾಹಿತಿಗಳು, ಚಿಂತಕರನ್ನು ಒಳಗೊಂಡಂತೆ ಸಂವಾದ ಏರ್ಪಡಿಸಲಾಗಿದೆ ಎಂದು ಪತ್ರಕರ್ತ ಇಂದೂಧರ ಹೊನ್ನಾಪುರ ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಅಧ್ಯಕ್ಷ ಅಗ್ನಿ ಶ್ರೀಧರ್, ಜಿ.ಕೆ.ಗೋವಿಂದ್‌ರಾವ್ ಉಪಸ್ಥಿತರಿದ್ದರು.







