‘ಪತ್ತನಾಜೆ ಚಲನಚಿತ್ರ ರಂಗಸಂಭ್ರಮ’ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು, ಆ.1: ‘ತುಳುನಾಡಿನ ಸಂಸ್ಕೃತಿ, ಜನಜೀವನ ಹಾಗೂ ನಂಬಿಕೆ-ನಡಾವಳಿಗಳನ್ನು ಆಧರಿಸಿ ನಿರ್ಮಿಸಲ್ಪಟ್ಟಿರುವ ‘ಪತ್ತನಾಜೆ’ ಚಲನಚಿತ್ರ ಉತ್ತಮ ಕಥಾವಸ್ತುವನ್ನು ಒಳಗೊಂಡಿದ್ದು, ಕರಾವಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿದೆ. ಒಳ್ಳೆಯ ಸಂದೇಶದೊಂದಿಗೆ ಸಿನಿಪ್ರಿಯರಿಗೆ ಬೇಕಾದ ಹಾಸ್ಯ, ಪ್ರೀತಿ-ಪ್ರೇಮ ಮತ್ತು ಸಾಹಸ ದೃಶ್ಯಗಳಿಂದ ಕೂಡಿದ ಈ ಚಲನಚಿತ್ರ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸುವಂತಾಗಲಿ’ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.
ಪಡು ಚಿತ್ತರಂಜನ ರೈಯವರಿಗೆ ’ಆಶ್ರಯ ಎಸ್ಟೇಟ್’ನಲ್ಲಿ ಟ್ರಸ್ಟ್ ಏರ್ಪಡಿಸಿದ್ದ ‘ಮರಿಯಲದ ಮಿನದನ’ ಕಾರ್ಯಕ್ರಮದಲ್ಲಿ ‘ಪತ್ತನಾಜೆ’ ತುಳುವೆರೆ ಪರ್ಬೊ ತುಳು ಚಿತ್ರತಂಡ ಆ.5ರಂದು ನಗರದ ಪುರಭವನದಲ್ಲಿ ಏರ್ಪಡಿಸಿರುವ ‘ಆಟಿಡೊಂಜಿ ದಿನ ಸೋಣದಂಚಿ ಪಜ್ಜೆ’ ಚಲನಚಿತ್ರ ರಂಗಸಂಭ್ರಮ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಚಿತ್ರದ ನಿರ್ಮಾಪಕ-ನಿರ್ದೇಶಕ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ಚಿತ್ರದ ಶೀರ್ಷಿಕೆ ಗೀತೆ ರಚನೆಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು.
ಪತ್ತನಾಜೆ ಚಲನಚಿತ್ರದ ನಿರ್ವಹಣಾ ಸಮಿತಿಯ ಅಧ್ಯಕ್ಷೆ ಶಮೀನಾ ಆಳ್ವ ಮುಲ್ಕಿ ಸ್ವಾಗತಿಸಿದರು. ಕರಾಲಿ ಚಿತ್ರದ ನಾಯಕ ನಟ ಸಾಹೀಲ್ ರೈ ವಂದಿಸಿದರು. ನಟ ಪ್ರತೀಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







