ಮಾತೇ ಮಹಾದೇವಿ ಗುರುದ್ರೋಹಿ: ಶಾಂತವೀರ ಸ್ವಾಮೀಜಿ
ಬೆಂಗಳೂರು, ಆ.1: ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದಿರುವ ಮಾತೇ ಮಹಾದೇವಿ ಗುರುದ್ರೋಹಿ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ನಗರದ ಪುರಭವನದ ಎದುರು ಅಖಿಲ ಭಾರತ ವೀರಶೈವ ಲಿಂಗಾಯಿತ ಯುವ ಸಭಾ ವತಿಯಿಂದ ಮಾತೆ ಮಹಾದೇವಿ ಅವರು ರಂಭಾಪುರಿ ಶ್ರೀಗಳ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಂತವೀರ ಸ್ವಾಮೀಜಿ, ವೀರಶೈವ-ಲಿಂಗಾಯುತ ಸಮುದಾಯ ಎರಡೂ ಒಂದೇ ಧರ್ಮ. ಈ ಪ್ರತ್ಯೇಕ ಧರ್ಮದ ಹೋರಾಟದ ಹಿಂದೆ ಕಾಣದ ಕೈಗಳಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಭೆ ನಡೆಸಿ ನಮ್ಮೆಲ್ಲರ ನಿಲುವು ಪ್ರಕಟಿಸಲಾಗುವುದು ಎಂದರು.
ವಿಭೂತಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರು ಎಲ್ಲೂ ಯಾವ ವಚನದಲ್ಲೂ ಲಿಂಗಾಯುತ ಪದ ಬಳಸಿಲ್ಲ. ಎಲ್ಲಾದರೂ ಬಳಸಿದ್ದಾರೆ ಎಂದು ಸಾಬೀತು ಮಾಡಿದರೆ, ನಾನು ಮಠ ಬಿಟ್ಟು ಕಾಡಿಗೆ ಹೋಗಲು ಸಿದ್ಧ ಎಂದು ನುಡಿದರು.
ವೀರಶೈವರು ಬಹಳ ಮುಗ್ಧರು, ಬಸವಣ್ಣನವರ ಹೆಸರು ಹೇಳಿದರೆ ಸಾಕು ಪ್ರಾಣ ಕೊಡಲು ಸಿದ್ಧರಿರುವವರು. ಮಾತೇ ಮಹಾದೇವಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮೊದಲು ಅವರು ನಿಲ್ಲಿಸಬೇಕಾಗಿದೆ ಎಂದು ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಯಾವುದೇ ಮಠಕ್ಕೆ ದುಡ್ಡು ನೀಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಠಗಳಿಗೆ ಹಣ ನೀಡಿ, ಸಮಾಜ ಒಡೆಯುವಂತಹ ಕೆಲಸಕ್ಕೆ ಮುಂದಾಗಿರುವುದಾಗಿ ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಯುವ ಸಭಾ ಅಧ್ಯಕ್ಷ ನಂಜುಂಡೇಶ್, ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿ, ಚಕ್ರುಭಾವಿ ಮಠದ ಸ್ವಾಮೀಜಿಗಳು, ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರು ಜಿಲ್ಲೆಯ ದನಗುರು ಶ್ರೀ, ರಾಮನಗರದ ರೇವಣ್ಣ ಸಿದ್ಧೇಶ್ವರ ಶಿವಾಚಾರ್ಯರು, ಕೋಲಾರದ ತೇಜೇಶಲಿಂಗ ಶಿವಾಚಾರ್ಯರು(ನಾಗಲಾಪುರ ಮಠ) ಸೇರಿ ಪ್ರಮುಖರು ಹಾಜರಿದ್ದರು.







