ಈಶಾನ್ಯ ಭಾರತಕ್ಕೆ 2,350 ಕೋ.ರೂ.ನೆರೆ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಿ

ಗುವಾಹಟಿ,ಆ.1: ಅಲ್ಪ ಮತ್ತು ದೀರ್ಘಾವಧಿಯ ಆಧಾರದಲ್ಲಿ ನೆರೆ ಸಂಕಷ್ಟವನ್ನು ಶಮನಗೊಳಿಸಲು ಈಶಾನ್ಯ ಭಾರತದ ಎಲ್ಲ ರಾಜ್ಯಗಳಿಗೆ ಒಟ್ಟು 2,350 ಕೋ.ರೂ.ಗಳ ಪ್ಯಾಕೇಜ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಕಟಿಸಿದರು.
ಇಲ್ಲಿಗೆ ಒಂದು ದಿನದ ಭೇಟಿ ನೀಡಿದ್ದ ಅವರು ಇತ್ತೀಚಿನ ನೆರೆ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿದರು.
ಪ್ರಧಾನಿಯವರು ಎಲ್ಲ ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ಕೋ.ರೂ.ನೆರೆ ಪ್ಯಾಕೇಜ್ ಪ್ರಕಟಿಸಿದ್ದಾರೆ ಎಂದು ತಿಳಿಸಿದ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಶ್ವ ಶರ್ಮಾ ಅವರು, ಈ ಪೈಕಿ 2,000 ಕೋ.ರೂ.ಈಶಾನ್ಯ ರಾಜ್ಯಗಳಲ್ಲಿ ನೆರೆ ಪ್ರಕೋಪದ ಪರಿಹಾರ ಮತ್ತು ಪುನರ್ವಸತಿಗೆ ಮೀಸಲಾಗಿದೆ. ಬ್ರಹ್ಮಪುತ್ರಾ ನದಿ ಮತ್ತು ವಿನಾಶಕಾರಿ ನೆರೆಯನ್ನುಂಟು ಮಾಡುವಲ್ಲಿ ಅದರ ಪಾತ್ರ ಕುರಿತು ಅಧ್ಯಯನಕ್ಕಾಗಿ ಸಂಶೋಧನಾ ಯೋಜನೆಗಾಗಿ 100 ಕೋ.ರೂ.ಗಳ ನಿಧಿಯನ್ನೂ ಮೋದಿ ಪ್ರಕಟಿಸಿದ್ದಾರೆ. ಈ ಯೋಜ ನೆಯು ವಿಜ್ಞಾನಿಗಳು, ಸಂಶೋಧಕರು ಮತ್ತು ಇಂಜಿನಿಯರ್‌ಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯೊಂದನ್ನು ಹೊಂದಿರಲಿದೆ. ಸಮಿತಿಯು ನದಿಯ ಬಗ್ಗೆ ಅಧ್ಯಯನ ನಡೆಸಿ ನೆರೆಯನ್ನು ತಡೆಯಲು ಮಾರ್ಗೋಪಾಯಗಳನ್ನು ಸೂಚಿಸಲಿದೆ. ಇದು ದೀರ್ಘಾವಧಿಯ ಯೋಜನೆಯಾಗಿರಲಿದೆ. ಅಸ್ಸಾಮಿಗೆ ಸಂಬಂಧಿಸಿದಂತೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ತಕ್ಷಣವೇ 250 ಕೋ.ರೂ.ಗಳನ್ನು ಬಿಡುಗಡೆ ಮಾಡುವುದಾಗಿಯೂ ಪ್ರಧಾನಿಯವರು ಘೋಷಿಸಿದ್ದಾರೆ ಎಂದು ವಿವರಿಸಿದರು.
ಪ್ರಧಾನಿಯವರು ಕಳೆದ ಜೂನ್‌ನಲ್ಲಿ 300 ಕೋ.ರೂ. ಬಿಡುಗಡೆಗೊಳಿಸಿದ್ದು, ಅದಕ್ಕೆ ಹೆಚ್ಚುವರಿಯಾಗಿ ಈ 250 ಕೋ.ರೂ.ಗಳನ್ನು ಪ್ರಕಟಿಸಲಾಗಿದೆ ಎಂದರು.





