ಇಂದಿರಾ ಕ್ಯಾಂಟೀನ್‌ಗೆ ದೇವಾಲಯದ ಜಾಗ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಆ. 1: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ ಇತಿಹಾಸ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಕಾಂಪೌಂಡ್ ಕೆಡವಿರುವುದನ್ನು ಖಂಡಿಸಿ ಚಾಮರಾಜಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಚಾಮರಾಜಪೇಟೆ 4ನೆ ಮುಖ್ಯರಸ್ತೆಯಲ್ಲಿರುವ ದೇವಾಲಯದ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ನನ್ನು ಆರಂಭಿಸಲು ಕಾಂಪೌಂಡ್ ಕೆಡವಿರುವ ಸಂಗತಿ ತಿಳಿದ ನೂರಾರು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ಬಿಬಿಎಂಪಿ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯದ ಆವರಣದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡುವುದು ಬೇಡ. ಕೆಡವಿ ಹಾಕಿರುವ ದೇವಾಲಯದ ಗೋಡೆಯನ್ನು ಇನ್ನೆರಡು ದಿನಗಳೊಳಗೆ ಕಟ್ಟಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಇಲ್ಲವಾದಲ್ಲಿ ಸ್ಥಳೀಯ ನಿವಾಸಿಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಪಾಲಿಕೆ ಸದಸ್ಯ ಬಿ.ವಿ. ಗಣೇಶ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಆರಂಭಕ್ಕೆ ದೇವಾಲಯದ ಜಾಗವನ್ನು ಆಯ್ಕೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಈ ಸ್ಥಳದಲ್ಲಿ ಕಟ್ಟುವುದೇ ಬೇಡ ಎಂದು ಬಿಬಿಎಂಪಿಗೆ ಮನವಿ ಮಾಡಲಾಯಿತು. ಆದರೂ ಅದನ್ನು ಧಿಕ್ಕರಿಸಿ ಕಾಂಪೌಂಡ್ ಪಕ್ಕದಲ್ಲಿದ್ದ 2 ಮರಗಳನ್ನು ಕಡಿದು ಹಾಕಲಾಗಿದೆ. ಈಗ ಕಾಂಪೌಂಡ್ ಗೋಡೆಯನ್ನು ಕೂಡ ಕೆಡವಿದರು ಎಂದು ಆರೋಪಿಸಿದರು.





