ಸ್ನೇಹಿತನ ಕೊಲೆ: ದಂಪತಿಗೆ ಜೀವಾವಧಿ ಶಿಕ್ಷೆ
ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ

ಉಡುಪಿ, ಆ.1: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಎಂಬಲ್ಲಿ ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಾರಾಡಿ ದರ್ಖಾಸುಮನೆಯ ಶೇಖರ ದೂಜಾ ಮೂಲ್ಯ(53) ಮತ್ತು ಆತನ ಪತ್ನಿ ಮಾಲತಿ ಶೇಖರ ಮೂಲ್ಯ(46) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಕಾಂತಾವರ ಗ್ರಾಮದ ಬಾರಾಡಿ ನಿವಾಸಿ ರಾಮ ಮೂಲ್ಯ(65) ಕೊಲೆಯಾದ ವ್ಯಕ್ತಿ.
ರಾಮ ಮೂಲ್ಯ 2011ರ ಸೆ.16ರಂದು ರಾತ್ರಿ ಸುಮಾರು 11 ಗಂಟೆಗೆ ಶೇಖರ ಮೂಲ್ಯರ ಮನೆಗೆ ಬಂದಿದ್ದು, ಸ್ನೇಹಿತರಾಗಿರುವ ಇವರು ದಂಪತಿ ಜೊತೆ ಅಸಭ್ಯವಾಗಿ ವರ್ತಿಸಿದರೆಂಬ ಕಾರಣಕ್ಕೆ ರಾಮ ಮೂಲ್ಯರನ್ನು ಮನೆಯ ಮುಂಭಾಗದ ಪಂಚಾಂಗದಲ್ಲಿ ಕಟ್ಟಿ ಹಾಕಿ ಶೇಖರ್ ಮೂಲ್ಯ ಹಾರೆಯ ಹಿಡಿಯಿಂದ ತಲೆಗೆ ಮತ್ತು ಮುಖಕ್ಕೆ ಹೊಡೆದುದಲ್ಲದೇ, ಮಾಲತಿ ಕತ್ತಿಯಿಂದ ರಾಮ ಮೂಲ್ಯರ ತಲೆಯನ್ನು ಕಡಿದು ಕೊಲೆ ಮಾಡಿದ್ದರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ವಿಜಯ ಪ್ರಸಾದ್ ಎಸ್. ನಡೆಸಿ, ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 302, 342, ಜೊತೆಗೆ 34 ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿಯನ್ನು ಸಲ್ಲಿಸಿದ್ದರು.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಗಳು ಎಸಗಿರುವ ಅಪರಾಧ ಸಾಬೀತಾಗಿದೆಯೆಂದು ಪರಿಗಣಿಸಿ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕ ಆರೋಪಿಗಳಿಗೆ ಭಾ.ದಂ.ಸಂ. ಕಲಂ 302ರ ಅಪರಾಧಕ್ಕೆ 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಈ ದಂಡದ ಮೊತ್ತವನ್ನು ನೊಂದವರಿಗೆ ಪರಿಹಾರ ಧನವಾಗಿ ನೀಡಲು ಆದೇಶಿಸಿದರು.







