ಯೋಜನೆಗಳ ಯಶಸ್ಸಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ: ಡಾ.ಎನ್.ಕೃಷ್ಣಮೂರ್ತಿ
ಬೆಂಗಳೂರು, ಆ.1: ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯವೆಂದು ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಹಾಯ ಸಿಂಗಲ್ ವಿಂಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ, ರೇಡಿಯೋ ಆಕ್ಟೀವ್ 90.4 ಹಾಗೂಸೆಂಟರ್ ಫಾರ್ ಆಡ್ವಕೆಸಿ ಅಂಡ್ ರೀಸರ್ಚ್ ಸಹಯೋಗದಲ್ಲಿ ಜೈನ್ ಯುನಿವರ್ಸಿಸಿಟಿಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಸಮಾಲೋಚನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಆಹಾರ ನಿಗಮವು ಆಹಾರ ಭದ್ರತಾ ಕಾಯಿದೆಯನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಯಾವೊಬ್ಬ ಪ್ರಜೆಯು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಈ ಕಾಯ್ದೆಯು ಅಸ್ತಿತ್ವಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಬಡ ಕುಟುಂಬದ ಹಸಿವನ್ನು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಹಲೀಮಾ ಮಾತನಾಡಿ, ಸಮಗ್ರ ಶಿಶು ಅಭಿವೃದ್ದಿ ಸೇವೆಗಳಲ್ಲಿ ನ್ಯೂನತೆಯನ್ನು ಸರಿಪಡಿಸಲು ಸಮುದಾಯದ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ. ಅಂಗನವಾಡಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಹಾಯ ಸಿಂಗಲ್ ವಿಂಡೋದ ಸದಸ್ಯೆ ಗಾಯತ್ರಿ ಮಾತನಾಡಿ, ಸರಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಲು ಇಲಾಖೆಗಳು ನೇರವಾಗಿ ಸಮುದಾಯದೊಂದಿಗೆ ಜೊತೆಗೂಡಬೇಕು. ಈ ನಿಟ್ಟಿನಲ್ಲಿ ಸಹಾಯ ಸಿಂಗಲ್ ವಿಂಡೋ ಸಂಸ್ಥೆಯು ಇಲಾಖೆ ಮತ್ತು ಸಮುದಾಯದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇಲಾಖೆ ನಮ್ಮನ್ನು ಗುರುತಿಸಿ ಕಾರ್ಯಕ್ರಮಗಳನ್ನು ತಲುಪಲು ನಮ್ಮ ನೆರವನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಹಾಯ ಸಿಂಗಲ್ ವಿಂಡೋದಡಿ ಕಾರ್ಯನಿರ್ವಹಿಸುವ 15 ವಾರ್ಡ್‌ಗಳಿಂದ ಸುಮಾರು 150 ಕಾರ್ಯಕರ್ತರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.







