ಇಂದಿರಾ ಕ್ಯಾಂಟೀನ್‌ಗೆ ಅಡ್ಡಗಾಲು: ಬಿಜೆಪಿ ವಿರುದ್ಧ ಪ್ರತಿಭಟನೆ
ಬೆಂಗಳೂರು, ಆ.1: ಇಂದಿರಾ ಕ್ಯಾಂಟಿನ್ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿ ಪಕ್ಷದ ನಾಯಕರ ವಿರುದ್ದ ಇಂದು ಬಿಬಿಎಂಪಿ ಕೇಂದ್ರ ಕಚೇರಿಯ ಅವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರಕಾರದ ಜನರ ಕಾರ್ಯಕ್ರಮಗಳಿಗೆ ಬಿಜೆಪಿಯವರು ವಿನಾಕಾರಣ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆಧಾರ ರಹಿತವಾಗಿ ಆರೋಪಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಬಡವರ ಅನ್ನಕ್ಕೆ ಬಿಜೆಪಿಯವರು ಮಣ್ಣು ಹಾಕಲು ಹೊರಟ್ಟಿದ್ದಾರೆ. ಬಿಜೆಪಿ ನಾಯಕರು ಬಡವರ ವಿರೋಧಿಗಳು. ಬಡವರ ಪರ ಇರುವ ಯೋಜನೆಗಳನ್ನು ಹಾಳು ಮಾಡಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ನೇತೃತ್ವದ ಸರಕಾರಕ್ಕೆ ಅಭೂತಪೂರ್ವ ಜನ ಬೆಂಬಲ ದೊರಕುತ್ತಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣುವ ಭೀತಿ ಬಿಜೆಪಿ ನಾಯಕರು ಕಾಡತೊಡಗಿದೆ. ಹೀಗಾಗಿ ಸರಕಾರದ ಪ್ರತಿಯೊಂದು ಯೋಜನೆಯಲ್ಲಿ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಜನಾರ್ದನ್, ಶೇಖರ್, ರಾಮಕೃಷ್ಣ, ಅಜಯ್ ಸೇರಿದಂತೆ ಇತರರು ಇದ್ದರು.







