ಪ್ರದೀಪ್‌ಸಿಂಗ್ ಕರೋಲ, ಸುಭಾಷ್‌ಚಂದ್ರ ಕುಂಟಿಯಾ ವಿರುದ್ಧ ದೂರು
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಆರೋಪ

ಬೆಂಗಳೂರು, ಆ.1: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಫಲಕ ಅಳವಡಿಸಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಪ್ರದೀಪ್ ಸಿಂಗ್ ಕರೋಲ ಹಾಗೂ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ವಿರುದ್ಧ ಕನ್ನಡ ಅನುಷ್ಠಾನ ಮಂಡಳಿ ಸಂಘಟನೆ ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಬಗ್ಗೆ ಮಾತನಾಡಿದ ಕನ್ನಡ ಅನುಷ್ಠಾನ ಮಂಡಳಿ ಸಂಘಟನೆ ರಾಜ್ಯಾಧ್ಯಕ್ಷ ಪ್ರಸಾದ್, ನಗರದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಗಳಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಕನ್ನಡ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ನಾಮಫಲಕಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಸರಕಾರದ ಆದೇಶವಿಲ್ಲದಿದ್ದರೂ ಹಿಂದಿ ನಾಮಫಲಕ ಅಳವಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಹಾಗೂ ಬಿಎಂಆರ್‌ಸಿಎಲ್ ಎಂಡಿ ಎಂ.ಪ್ರದೀಪ್ ಸಿಂಗ್ ಕರೋಲ ವಿರುದ್ಧ ದೂರು ನೀಡಲಾಗಿದೆ ಎಂದರು.
ಸಂಘಟನೆಯ ದೂರಿನಲ್ಲಿ ಕೆಲ ಗೊಂದಲಗಳಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯ ಕೇಳಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.





