ಎಲ್ಲ ಆಕ್ರಮಣಗಳನ್ನು ಸೋಲಿಸುವ ವಿಶ್ವಾಸ ಚೀನಾಕ್ಕಿದೆ: ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪುನರುಚ್ಚಾರ

ಬೀಜಿಂಗ್, ಆ. 1: ಚೀನಾ ಶಾಂತಿ ಬಯಸುತ್ತದೆ, ಆದರೆ ‘ಎಲ್ಲ ಆಕ್ರಮಣ’ಗಳನ್ನು ಸೋಲಿಸುವ ವಿಶ್ವಾಸ ಅದಕ್ಕಿದೆ ಎಂದು ಆ ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಹೇಳಿದ್ದಾರೆ.
ಭಾರತ ಮತ್ತು ಚೀನಾ ಗಡಿಯ ಸಿಕ್ಕಿಂ ವಲಯದ ಡೋಕಾ ಲದಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
‘‘ನಾವು ಯಾವತ್ತೂ ಆಕ್ರಮಣ ಮಾಡುವುದಿಲ್ಲ ಅಥವಾ ಜಮೀನು ವಿಸ್ತರಣೆಗೆ ಮುಂದಾಗುವುದಿಲ್ಲ. ಆದರೆ, ಎಲ್ಲ ಆಕ್ರಮಣಗಳನ್ನು ಸೋಲಿಸುವ ವಿಶ್ವಾಸ ನಮಗಿದೆ’’ ಎಂದು ಚೀನಾ ಸೇನೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’ (ಪಿಎಲ್‌ಎ)ಯ 90ನೆ ವರ್ಷದ ಸ್ಥಾಪಕ ದಿನಾಚರಣೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.
‘‘ಚೀನಾ ಭೂಭಾಗದ ಯಾವುದೇ ಭಾಗವನ್ನು ಯಾವತ್ತೂ ಯಾವುದೇ ರೂಪದಲ್ಲಿ ವಿಭಜಿಸಲು ಯಾವುದೇ ಜನರಿಗೆ, ಸಂಘಟನೆಗೆ ಅಥವಾ ರಾಜಕೀಯ ಪಕ್ಷಕ್ಕೆ ನಾವು ಅವಕಾಶ ನೀಡುವುದಿಲ್ಲ’’ ಎಂದು ‘ಗ್ರೇಟ್ ಹಾಲ್ ಆಫ್ ದ ಪೀಪಲ್’ನಲ್ಲಿ ನಡೆದ ಸಮಾರಂಭದಲ್ಲಿ ಅವರು ಹೇಳಿದರು.
ಯಾವುದೇ ಆಕ್ರಮಣಗಳನ್ನು ಎದುರಿಸುವ ಸಾಮರ್ಥ್ಯ ಪಿಎಲ್‌ಎಗಿದೆ ಎಂಬುದಾಗಿ ರವಿವಾರವೂ ಜಿನ್‌ಪಿಂಗ್ ಹೇಳಿದ್ದರು.
ಬಿಕ್ಕಟ್ಟಿಗೆ ಭಾರತ ಕಾರಣ ಎಂಬುದಾಗಿ ಚೀನಾ ಆರೋಪಿಸುತ್ತಿದೆ. ಭಾರತೀಯ ಸೈನಿಕರು ಅತಿಕ್ರಮಣ ಮಾಡಿ, ಡೋಕಾ ಲ ವಲಯದಲ್ಲಿ ಚೀನಾ ಸೈನಿಕರು ರಸ್ತೆ ನಿರ್ಮಿಸುತ್ತಿರುವುದನ್ನು ತಡೆದಿದ್ದಾರೆ ಎಂದು ಅದು ಹೇಳುತ್ತಿದೆ. ಡೋಕಾ ಲ ಪ್ರದೇಶ ತನಗೆ ಸೇರಿದ್ದು ಎಂಬುದಾಗಿ ಭೂತಾನ್ ಪ್ರತಿಪಾದಿಸುತ್ತಿದೆ.
‘‘ನಮ್ಮ ಸಾರ್ವಭೌಮತೆ, ಭದ್ರತೆ ಅಥವಾ ಅಭಿವೃದ್ಧಿ ಹಿತಾಸಕ್ತಿಗಳಿಗೆ ಮಾರಕವಾದ ಕಹಿ ಹಣ್ಣನ್ನು ನಾವು ನುಂಗಬೇಕೆಂದು ಯಾರೂ ನಿರೀಕ್ಷಿಸಬಾರದು’’ ಎಂದು ಕ್ಸಿ ಮಂಗಳವಾರ ಹೇಳಿದರು.
ಜಿನ್‌ಪಿಂಗ್‌ರ ಭಾಷಣಗಳು ಕಟುವಾಗಿರುವುದಾದರೂ, ಚೀನಾ ಭಾರತದ ವಿರುದ್ಧ ಯುದ್ಧ ಘೋಷಿಸುವ ಸಾಧ್ಯತೆ ಇಲ್ಲ ಎಂದು ಪಿಎಲ್‌ಎ ಪ್ರಮುಖ ಸೇನಾ ಪರಿಣತರೊಬ್ಬರು ಹೇಳುತ್ತಾರೆ.







